ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೮೫

ಅದರ ಸಪ್ಪುಳ ಬೇರೆ

ಶಿವರಾತ್ರಿಯ ಮರುದಿನ ತೀವ್ರ ಅಡಿಗೆ ಮಾಡಿ, ಬೆಳಗಾಗುವುದರಲ್ಲಿ ಊಟದ ಸಿದ್ಧತೆ ನಡೆಯಿಸುವುದು ವಾಡಿಕೆ. ಲಿಂಗಾಯತರಾದವರು ಮನೆದೇವರನ್ನು ಪೂಜಿಸಿದ ಬಳಿಕ, ಒಬ್ಬ ಜಂಗಮನನ್ನು ಕರೆತಂದು ಉಣ್ಣಿಸಿದ ತರ್ವಾಂಯವೇ ಮನೆಯವರ ಊಟವಾಗುವದು.

ಹಳ್ಳಿಯಲ್ಲಿ ಅಂದು ಜಂಗಮನು ಸಿಗುವುದೂ ಕಷ್ಟವೇ. ಸರತಿಂಪಂತೆ ಮನೆ ಮುಗಿಸಬೇಕಾಗುವುದರಿಂದ ಸಕಾಲಕ್ಕೆ ಜಂಗಮ ಬರಲಾರನು.

ಶೆಟ್ಟರ ತಾಯಿ ಅಂದು ಜ೦ಗಮನ ದಾರಿ ನೋಡುತ್ತ ಕುಳಿತೇ ಕುಳಿತಳು. ಬಹಳ ಹೊತ್ತಿನ ಮೇಲೆ ಜ೦ಗಮನು ಬಂದನು. ಅಜ್ಜಿ ಆತನ ಕೈಕಾಲಿಗೆ ನೀರು ಕೊಟ್ಟು ಗದ್ದಿಗೆಯ ಮೇಲೆ ಕುಳ್ಳಿರಿಸಿದಳು. ಧೂಳಪಾದೋದಕ ತೆಗೆದುಕೊಂಡು ಮನೆಯಲ್ಲೆಲ್ಲ ಸಿಂಪಡಿಸಿದಳು. ಆ ಬಳಿಕ ತೊಳೆದ ತಾಬಾಣವನ್ನು ತಂದು ಜಂಗಮನ ಮುಂದಿರಿಸಿ, ತಾನು ಉಣಬಡಿಸುವದಕ್ಕೆ ಎತ್ತುಗಡೆ ನಡೆಸಿದಳು.

ಗದ್ದಿಗೆಯ ಮೇಲೆ ಕುಳಿತ ಜ೦ಗಮನಿಗೂ ತಿಳಿಯದಂತೆ ಒಂದು ಅಪಾನವಾಯು ಹೊರಬಿದ್ದು ಸಪ್ಪಳ ಮಾಡಿತು. ಆ ಸಪ್ಪಳ ಕಿವಿಗೆ ಬಿದ್ದಾಗ ಆತನ ಲಕ್ಷ್ಯಕ್ಕೆ ಬಂತು. ಮನೆಯವರು ಏನೆಂದುಕೊಳ್ಳುವರೋ ಎಂದು ಚೆ೦ಂತಿಸತೊಡಗಿದನು. ಸಾಧ್ಯವಿದ್ದಷ್ಟು ಮನೆಯವರ ತಿಳುವಳಿಕೆ ದೂರಗೊಳಿಸುವ ಸಲುವಾಗಿ, ತಾಬಾಣವನ್ನು ತುದಿಬೆರಳುಗಳಿಂದ ತಿಕ್ಕಿ ಒರೆಸುತ್ತ ಬೆರಳು ಎಳೆದು ಸಪ್ಪಳ ಮಾಡಲು ತೊಡಗಿದನು.

ಅಷ್ಟರಲ್ಲಿ ಅಜ್ಜಿ ಬಂದು ವಿನಯದಿಂದ ಹೇಳಿದಳು - “ಇದರ ಸಪ್ಪುಳ ಬೇರೆ ಆಗ್ತದೆ ಅಪ್ಪಾ ಅವರೇ.”

ಅಜ್ಜಿಯ ಮಾತು ಕೇಳಿ ಜ೦ಗಮನಿಗೆ ನೆಲದಲ್ಲಿ ಇಳಿದು ಹೋದಂತಾಯಿತು, ನಾಚಿಕೆಯಿಂದ ಮುಂದಿನ ಕೆಲಸವನ್ನು ಅವಸರವಸರವಾಗಿ ಮುಗಿಸಿ ಎದ್ದು ಓಡಿದನು. ದಕ್ಷಿಣೆ ಕೇಳುವುದನ್ನೂ ಮರೆತನು.

 •