ವಿಷಯಕ್ಕೆ ಹೋಗು

ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹುರಮುಂಜಗೇಡಿ

ಹಳ್ಳಿಯಲ್ಲಿ ಚಿಕ್ಕ ತಕ್ಕಡಿ ಅಂಗಡಿ ಒಂದು. ಬೆಲ್ಲ - ಎಣ್ಣೆ ಇಂಗು - ಜೀರಿಗೆ ಚುರಮರಿ - ಪುಠಾಣಿ ಮಾರುವ ಕಿರಾಣಿ ಅಂಗಡಿ. ಹಳ್ಳಿಯೊಳಗಿನ ಗಿರಾಕಿಗಳು ಉಡಿಯಲ್ಲಿ ಜೋಳವನ್ನೋ ಕುಸುಬೆಯನ್ನೋ ತಂದು ಅಂಗಡಿಕಾರನ ಮಾಷಿನಲ್ಲಿ ಅಳೆದುಹಾಕಿ ತಮಗೆ ಬೇಕಾದ ಸಾಮಾನು ಕೊಂಡುಕೊಳ್ಳುವುದು ವಾಡಿಕೆ. ದುಡ್ಡು ತಂದು ವ್ಯಾಪಾರ ಮಾಡಿಕೊಳ್ಳುವವರು ಬಹಳ ಕಡಿಮೆ.

ಹಬ್ಬ ಹುಣ್ಣಿಮೆ ದಿವಸ ಇಲ್ಲವೆ ಸೋಮವಾರ ದಿವಸ ಗಿರಾಕಿಗಳ ಗೊಂದಲ ಹೆಚ್ಚಿಗಿರುತ್ತದೆ. ಸರತಿಯ ಮೇಲೆ ಗಿರಾಕಿಗಳು ವ್ಯಾಪಾರ ಗಿಟ್ಟಿಸಬೇಕಾಗುತ್ತದೆ. ಒಂದು ಸಾರೆ ಗೌಡರ ಮನೆಯಲ್ಲಿ ತೊತ್ತುಗೆಲಸಮಾಡುವ ಬಂಡೆವ್ವ ಮುದಿಕೆ ಉಡಿಯಲ್ಲಿ ಜೋಳ ಕಟ್ಟಿಕೊಂಡು ಬಂದು ಸರತಿ ಕಾಯುತ್ತ ನಿಂತೇ ನಿಂತಳು. ಮುಂದಿನ ಗಿರಾಕಿಗಳು ಹೊರಟು ಹೋದ ಬಳಿಕ, ಮುದಿಕೆ ತನ್ನ ಉಡಿಯೊಳಗಿನ ಜೋಳವನ್ನು ಅಳೆದು ಹಾಕಿದಳು.

“ಏನು ಕೊಡಲಿ” ಎಂದನು ಅಂಗಡಿಕಾರ.

“ಗೌಡತಿ ಏನೋ ಹೇಳಿದ್ದಾಳೆರೀ” ಎಂದು ನೆನಪು ಮಾಡಿಕೊಳ್ಳಕತ್ತಿದಳು.

“ಅಲ್ಲ” ಮುದಿಕೆಯ ಸೊಲ್ಲು.

“ಇಂಗು ಜೀರಿಗೆ ?”

“ಅದು ಅಲ್ಲ?”

“ಶುಂಠಿ, ಮೆಣಸು ?"

“ಊಂ! ಹು?"

“ಅಡಿಕೆ, ಕಾಚು ?”

ಅಲ್ಲವೆನ್ನುವಂತೆ ಮುದಿಕೆ ಗೋಣುಕೊಡಹಿದಳು. ಅಂಗಡಿಕಾರನಿಗೆ ಬೇಸರಾಯಿತು. ಹಿಂದೆ ನಿಂತ ಗಿರಾಕಿಗಳು ಅವಸರ ಮಾಡತೊಡಗಿದ್ದನ್ನು ಕಂಡು ಸಿಟ್ಟಿನಿ೦ದ ಆ ಮುದಿಕೆಗೆ “ಕೇಳಿದ್ದಕ್ಕೆಲ್ಲ ಅಲ್ಲವೆನ್ನುತ್ತ ಮತ್ತೇಕೆ ನಿಂತೆ ? ನಿನ್ನ ಜೋಳ ತೆಗೆದುಕೊಂಡು ಹೋಗು, ಹುರಮುಂಜಗೇಡೀ” ಎಂದು ಗದ್ದರಿಸುವಷ್ಟರಲ್ಲಿ - “ಅದೇ ನೋಡೋ ಅಪ್ಪಾ ನನಗೆ ಬೇಕಾಗಿದ್ದು ಹುರಮು೦ಜ.