ಶಿವರಾತ್ರಿ - ಪಾರಣೆ
ಗ೦ಡನು ಶಿವರಾತ್ರಿಯ ದಿನ ಉಪವಾಸ ಮಾಡುವನೆಂದು ತಿಳಿದು ಹೆಂಡತಿ ತಾನೂ ಉಪವಾಸ ಮಾಡುವುದನ್ನು ನಿರ್ಧರಿಸಿದಳು. ಉಪವಾಸವೆಂದರೂ ಹಳ್ಳಿಯಲ್ಲಿ ಗೆಣಸು, ಬಾಳೆಹಣ್ಣು ಕಜ್ಜೂರಿ, ಸೇಂಗಾ ತಿನ್ನುವುದು ವಾಡಿಕೆಯಾಗಿದೆ. ಆ ಪ್ರಕಾರ ಗಂಡ ಹೆಂಡಿರು ಸಾಯಂಕಾಲದಲ್ಲಿ ಫಲಾಹಾರ ಮಾಡಿದರು. ಮರುದಿನ ಹೊತ್ತು ಹೊರಡುವ ವೇಳೆಗೆ ಪಾರಣೆ. ಅದಕ್ಕಾಗಿ ಹಿಟ್ಟು ಬೇಳೆ, ಬೆಲ್ಲ, ಅಕ್ಕಿಗಳನ್ನು ಸಾವರಿಸಿಟ್ಟಳು.
ಶಿವರಾತ್ರಿಯದಿನ ಇಡಿಯರಾತ್ರಿ ಮಹಾದೇವನ ಗುಡಿಯಲ್ಲಿ ನಡೆಯುವ ಭಜನೆಯಲ್ಲಿ ಭಾಗವಹಿಸಿಲು ಗಂಡನು ಹೊರಟನು “ನೀನೂ ಗುಡಿಗೆ ಬಂದುಬಿಡು ನನ್ನೊಡನೆ. ಭಜನೆ ಕೇಳುವಿಯಂತೆ. ಸಾಕಷ್ಟು ಹೆಣ್ಣು ಮಕ್ಕಳು ಬಂದಿರುತ್ತಾರೆ ಎಂದು ಹೆಂಡತಿಗೆ ಹೇಳಲು, ಆಕೆ ಗಂಡನ ಬಿಡೆಯಕ್ಕಾಗಿ ಗುಡಿಗೆ ಹೋದಳು.
ಭಜನೆ ಆರಂಭವಾಗಿ ಒಳ್ಳೆಯ ಭರಕ್ಕೆ ಬರತೊಡಗಿತ್ತು. ಅಂಥ ಪ್ರಸಂಗದಲ್ಲಿ ಆಕೆಯ ಮನಸ್ಸು ಮನೆಯತ್ತ ಎಳೆಯತೊಡಗಿತು. ಬೇಕಾದಷ್ಟು ಫಲಾಹಾರ ಮಾಡಿದ್ದರೂ ಆಕೆಗೆ ಉಂಡಷ್ಟು ತೃಪ್ತಿಯಾಗಿರಲಿಲ್ಲ. ಹಸಿವೆಯೆನಿಸಹತ್ತಿದ್ದರಿಂದ ಮನೆಗೆ ಹೋಗಿ, ಏನಾದರೂ ಮಾಡಿಕೊಂಡು ತಿಂದು ಮಲಗಬೇಕೆಂದು ಯೋಚಿಸಿದಳು. “ಗಂಡನಂತೂ ಭಜನೆಯಲ್ಲಿ ಭಾಗಿಯಾಗಿದ್ದರಿಂದ ಅಡ್ಡಹೊತ್ತಿನಲ್ಲಿ ಮನೆಗೆ ಬರುವಂತಿಲ್ಲ. ಆದ್ದರಿಂದ ನನ್ನ ಉದ್ದೇಶವು ನಿರ್ಬಾಧವಾಗಿ ನೆರವೇರುತ್ತದೆ” - ಎಂದು ಎದ್ದು ಮನೆಂಯ ಹಾದಿ ಹಿಡಿದಳು. ಮನೆಗ ಬಂದವಳೇ ಒಲೆಹೊತ್ತಿಸಿ, ಭಾಂಡೆಯಲ್ಲಿ ಸಜ್ಜುಗವನ್ನು ಅಟ್ಟು, ಕೋಣಮಗಿಯಲ್ಲಿ ಆರಹಾಕಿದಳು. ತಾಬಾಣದಲ್ಲಿ ಅಷ್ಟಷ್ಟು ತೆಗೆದುಕೊಂಡು ತಿಂದರಾಯಿತೆಂದು, ತಾಬಾಣ ತೆಗೆದುಕೊಳ್ಳುವಷ್ಟರಲ್ಲಿ ಗುಡಿಯಿಂದ ಗಂಡ ಬಂದು, ಬಾಗಿಲು ತೆಗೆಯೆಂದು ಕೂಗಿದನು. ಹೆಂಡತಿ ಲಗುಬಗೆಯಿಂದ ಅದೆಲ್ಲವನ್ನೂ ಮುಚ್ಚಿಟ್ಟು ದಡದಡನೆ ಬಾಗಿಲಿಗೆ ಬಂದು ಕದ ತೆರೆದಳು.
“ಗುಡಿಯಿಂದ ತೀವ್ರವೇ ಬಂದುಬಿಟ್ಟೆಯಲ್ಲ! ಏಕೆ ?” ಎಂದು ಕೇಳಿದನು ಗಂಡ.