ಗಂಡ ಹೆಂಡಿರ ಕದನ
ನನ್ನೀಸಾಹೇಬ ಹಾಗೂ ಬಡೇಮಾ ಎಂಬ ಇಬ್ಬರು ಗಂಡಹೆಂಡಿರಿದ್ದರು. ನನ್ನೀ ಸಾಹೇಬನು ಹೆಸರಿಗೆ ತಕ್ಕಂತೆ ತೆಳ್ಳಗಿನ ಕುಳ್ಳನೇ ಆಗಿದ್ದನು. ಅದರಂತೆ ಬಡೇಮಾ ಕೂಡ ಹೆಸರಿಗೆ ಒಪ್ಪುವ ಹಾಗೆ ಮೇಲೆತ್ತರದ ದುಂಡಮೈಯವಳೇ ಆಗಿದ್ದಳು. ಅಂಥ ಇಜ್ಜೋಡಿನ ಸಂಸಾರವೂ ಸಾಗಿಯೇ. ಬಂದಿತ್ತು ಆದರೆ ಹಲವು ಸಾರೆ ಅವರಲ್ಲಿ ವಿರಸಪ್ರಸಂಗಗಳು ಬರುತ್ತಲೆ ಅವರಲ್ಲಿ ಬಾಯಿಗೆ ಬಾಯಿ, ಕೈಗೆಕ್ಕೆ ಹತ್ತಿ ಕದನಗಳಾಗುತ್ತಿದ್ದವು. ಆದರೆ ಗಂಡಹೆಂಡಿರ ಜಗಳ ಉಂಡು ಮಲಗುವವರೆಗಷ್ಟೇ ಅಲ್ಲವೇ?
ಬಾಯಿಗೆ ಬಾಯಿ ಹತ್ತಿ ಜಗಳಾಡಿದ್ದು ಸಾಕಾಗದೆ, ನನ್ನೀಸಾಹೇಬನು ಸಿಟ್ಟಿನ ಭರದಲ್ಲಿ ಹೆಂಡತಿಯನ್ನು ಒಳಿತಾಗಿ ಥಳಿಸಬೇಕೆಂದು, ಒಂದು ಬಡಿಗೆಯಿತ್ತಿ ಆಕೆಯ ಮೈಮುಟ್ಟಹೋಗಿ ಹೊಡೆಯಲನುವಾದನು. ಅಷ್ಟರಲ್ಲಿ ಹೆಂಡತಿ ಆತನನ್ನು ಎದುರಿಸಿ ಆತನ ಕೈಯೊಳಗಿನ ಬಡಿಗೆಯನ್ನು ನಿರಾಯಾಸವಾಗಿ ಕಸಿದುಕೊಂಡು ಜಂತಿಯಲ್ಲಿ ತುರುಕಿಬಿಡುವಳು. ಅದು ಕುಳ್ಳನಾದ ನನ್ನೀ ಸಾಹೇಬನಿಗೆ ನಿಲುಕದಂತಾಗುವದು. ಆ ಕಾರಣದಿ೦ದ ಅವರ ಜಗಳವು ಮೊ೦ಡವಾಗಿಬಿಡುವದು.
ಒಮ್ಮೊಮ್ಮೆ ಬಡೇಮಾನಿಗೆ ಸಿಟ್ಟು ಬಂದಾಗ ಆಕೆ ಬಾಗಿಲಿಕ್ಕಿ ಗಂಡನನ್ನು ಅದೇ ಬಡಿಗೆಯಿಂದ ಬಡಿಯುವಳು. ಹೆಂಡತಿ ಬಡೆಯುವಳೆಂದರೂ ಗಂಡನ ಬಾಯ ಅಬ್ಬರವೇ ಹೆಚ್ಚು. ಅದನ್ನು ಕೇಳಿದವರಿಗೆ ಅನಿಸುವುದು - "ಗಂಡನೇ ಬಾಗಿಲು ಹಾಕಿ ಹೆಂಡತಿಯನ್ನು ಜಿಗಿಜಿಗಿದು ಬಡಿಯುತ್ತಿದ್ದಾನೆ. ಅಂತೆಯೇ ದನಿ ತೇಕುತ್ತದೆ."
ಹೆಂಡತಿ ಎಡಗೈಯಿಂದ ಗಂಡನ ರಟ್ಟೆಹಿಡಿದು ಮಗ್ಗುಲಿಗೆ ನಿಲ್ಲಿಸಿ, ಬೆನ್ನ ಮೇಲೆ ಬಡಿಗೆಯೇಟು ಹಾಕುವಳು. ಇನ್ನೇನು ಏಟು ಬೀಳುವುದಿನ್ನು ಎನ್ನುವ ಕ್ಷಣದಲ್ಲಿ - "ಎಷ್ಟಿರಬೇಕು ನಿನ್ನ ಸೊಕ್ಕು?" ಎಂದು ಜೀರುವನು. ಅದು ಮುಗಿಯುವಷ್ಟರಲ್ಲಿ ಬಡಿಗೆಯೇಟಿನ ಸಪ್ಪಳ! ಆಮೇಲೆ - "ನಿನ್ನ ಜೀವ ಉಳಿಸುವದಿಲ್ಲ ಇನ್ನು" ಎಂದು ಗುಡುಗುವನು. ತರುವಾಯ ಇನ್ನೊಂದು ಏಟು. ಅನಂತರ - ನಿನ್ನನ್ನು ಕೊಂದು ಹಾಕಿದರೂ ನನ್ನ ಸಿಟ್ಟು ಇಳಿಯದು"