ಒಂಟೆಯ ಮೇಲಿನ ಶಾಹಣೆ
ಹಳ್ಳಿಯಲ್ಲಿ ಒಕ್ಕಲಿಗರ ಮನೆ. ದನಗಳ ಕೊಟ್ಟಿಗೆಯಲ್ಲಿಯೇ ಅವರು ಬಚ್ಚಲಮಾಡಿ ಕೊಂಡಿದ್ದರು. ಎಮ್ಮೆಯ ಕರು ಒಂದು ದಿನ ನೀರಡಿಸಿ, ಕಟ್ಟಿಹಾಕಿದ ಕಣ್ಣಿಯನ್ನು ಹರಿದುಕೊಂಡು ಬಚ್ಚಲುಮನೆಗೆ ನೀರು ಕುಡಿಯಲು ಹೊಕ್ಕಿತು. ಜಳಕದ ಹಂಡೆಯಲ್ಲಿ ಬಾಯಿಹಾಕಿತು.
ಚಿಕ್ಕದಾದ ಹಂಡೆಯ ಬಾಯಿಗಿಂತ ದೊಡ್ಡದಾದ ಕೋಣನ ತಲೆಯು ಹಂಡೆಯಲ್ಲಿ ಸಿಕ್ಕುಕೊ೦ಡಿತು. ಜಗ್ಗಾಡಿತು, ಎಳೆದಾಡಿತು. ಬಗೆ ಹರಿಯಲಿಲ್ಲ. ಮನೆಯವರು; ಓಡಿಬಂದರು ಒಬ್ಬಿಬ್ಬರು ಹಂಡೆ ಹಿಡಿದರು. ಒಬ್ಬಿಬ್ಬರು ಕೋಣಕರುವನ್ನು ಹಿಡಿದೆಳೆದರು. ಏನುಮಾಡಿದರೂ ಕೋಣನ ತಲೆ ಹಂಡೆಯಿಂದ ಹೊರಬರಲಿಲ್ಲ. ಕೊನೆಗೆ ಊರಲ್ಲಿರುವ ಶಾಹಣೆನನ್ನು ಕರೆಯಕಳಿಸಿದರು.
ಬಹಳ ಶಾಹಣೆ ಎಂದು ಆತನು ಆ ಭಾಗದ ಹಳ್ಳಿಗಳಿಗೆಲ್ಲ ಹೆಸರಾಗಿದ್ದನು. ಎಲ್ಲಿಗೆ ಹೋದರೂ ಆತನು ಒಂಟೆಯ ಮೇಲೆ ಕುಳಿತುಕೊಂಡೇ ಹೋಗುತ್ತಿದ್ದನು.ಹೋದಲ್ಲಿ ಅವನು ಯುಕ್ತಿ ಹೇಳುವಾಗ ಸಹ ಒಂಟೆಯ ಮೇಲಿಂದ ಕೆಳಗಿಳಿಯುತ್ತಿದ್ದಿಲ್ಲ. ಒಂಟೆಯ ಮೇಲೆ ಕುಳಿತುಕೊಂಡೇ ಬುದ್ಧಿ ಹೇಳುತ್ತಿದ್ದುದರಿಂದ ಅವನನ್ನು ಒಂಟೆಯ ಮೇಲಿನ ಶಾಹಣೆ ಎಂದು ಕರೆಯುತ್ತಿದ್ದರು.
ಆ ಒಂಟೆಯಮೇಲಿನ ಶಾಹಣೆ ಬಂದನು. ಆದರೆ ಆ ರೈತನ ಮನೆಯ ಒಳಗೆ ಬರುವುದು ಹೇಗೆ? ಆತನಂತೂ ಒಂಟೆಯ ಮೇಲೆ ಕುಳಿತುಕೊಂಡೇ ಬರತಕ್ಕವನು.
ಮನೆಯೊಳಗೆ ಬರುವದಕ್ಕೆ ಯುಕ್ತಿಯನ್ನೂ ಅವನೇ ಹೇಳಿಕೊಟ್ಟನು. ಆ ಪ್ರಕಾರ ತಲೆಬಾಗಿಲನ್ನು ಕಿತ್ತಿಡಬೇಕಾಯಿತು. ಆಗ ಒಳಗೆ ಬಂದು ಇದ್ದ ತೊಡಕನ್ನು ನಿರೀಕ್ಷಿಸಿದನು—"ಇದೇನು ಮಹಾ?" ಎಂದನು.
ಕೋಣನ ಕುತ್ತಿಗೆ ಕಡಿಯಲು ಹೇಳಿದನು.
ಹಂಡೆಯನ್ನು ಒಡೆಯಲು ಸಲಹೆಯಿತ್ತನು.
ಅವನು ಹೇಳಿದಂತೆ ಎಲ್ಲವೂ ನಡೆದುಹೋಯಿತು.