ಮೈನಾವತಿ
ಒಂದೂರಲ್ಲಿ ಒಬ್ಬ ರಾಜ, ಒಬ್ಬ ಪ್ರಧಾನಿ, ಒಬ್ಬ ಸಾಹುಕಾರ ಇದ್ದರು. ಆ ಮೂವರಿಗೂ ಒಬ್ಬೊಬ್ಬರಂತೆ ಗಂಡಸು ಮಕ್ಕಳಿದ್ದರು. ಅವರೆಲ್ಲರೂ ಸಾಲೆ ಬರೆಯುತ್ತಿದ್ದರು. ಮುಂದೆ ದೊಡ್ಡವರಾದರು. “ಬೇಟೆಗಾಗಿ ಎಕ್ಕೀಹಳ್ಳಿಗೆ ಹೋಗಾರಿ" ಎಂದು ಮೂವರೂ ನಿಶ್ಚಯಿಸಿದರು. ಅಷ್ಟರಲ್ಲಿ ಅವರ ತಾಯಿತಂದೆಗಳು ಅವರ ಲಗ್ನ ಮಾಡಲು ತಯಾರಿ ನಡೆಸಿದರು. ಅದರಂತೆ ಒಳ್ಳೆಯ ಮುಹೂರ್ತದಲ್ಲಿ ಲಗ್ನವನ್ನೂ ಮಾಡಿಹಾಕಿದರು. ಅವರು ಬೇಟೆಗೆ ಹೋಗಲು ಗಡಬಿಡಿ ಮಾಡುತ್ತಿರಲು, ಶೋಭಾನ ಮಾಡಿಕೊಂಡುಹೋಗಿರಿ - ಎಂದು ಹೇಳಿದರು. ಅದರಂತೆ ಶೋಭನ ಕಾರ್ಯ ಮುಗಿಸಿಕೊಂಡು ಬೇಟೆಂಯಾಡಲು ಹೋದರು.
ಮುಂದೆ ಒಂಬತ್ತು ತಿಂಗಳಿಗೆ ಅವರ ಹೆಂಡಂದಿರು ಕೂಸುಗಳಿಗೆ ಜನ್ಮವಿತ್ತರು. ರಾಜ ಮತ್ತು ಪ್ರಧಾನಿಗಳಿಗೆ ಗಂಡು ಕೂಸುಗಳು ಹುಟ್ಟಿದವೆಂದೂ ಸಾಹುಕಾರನಿಗೆ ಹೆಣ್ಣು ಕೂಸು ಹುಟ್ಟಿತೆಂದೂ ಪತ್ರಬಂತು. ಹೆಣ್ಣು ಹುಟ್ಟಿತೆಂದು ಸಾಹುಕಾರನಿಗೆ ಸ್ವಲ್ಪ ಅಸಮಾಧಾನ. ಅದಕ್ಕೇಕೆ ಅಷ್ಟು ಗಿಲಿಗಿಲಿ ಆಗುತ್ತೀ ಎಂದು ರಾಜ ಮತ್ತು ಪ್ರಧಾನಿ ಸಾಹುಕಾರನಿಗೆ ಹಂಗಿಸಿದರು. ತೊಟ್ಟಿಲಿಕ್ಕುವ ಸಲುವಾಗಿ ಮೂವರೂ ಮನೆಗೆ ಬಂದು ಮತ್ತೆ ಬೇಟೆಗೆ ಹೋದರು. ವರ್ಷಗಳು ಉರುಳಿದವು.
ಮಕ್ಕಳು ದೊಡ್ಡವರಾದರು. ಆಗ ಅವರು ಊರಿಗೆ ಮರಳಿದರು. ಸಾಹುಕಾರನ ಮಗಳ ಹೆಸರು ಮೈನಾವತಿ. ಅವಳು ಮದುವೆಂಯ ವಯಸ್ಸಿಗೆ ಬಂದಿದ್ದಾಳೆ. ವರಗಳು ಹೆಣ್ಣು ಕೇಳಲು ಬಂದವು. ಅಷ್ಟರಲ್ಲಿ ರಾಜನಮಗ ಹಾಗೂ ಪ್ರದಾನಿಯ ಮಗ - “ನಾವು ಇನ್ನೂ ಎಷ್ಟುದಿನ ಸಾಲೀ ಬರೀಬೇಕು" ಎಂದು ತಕರಾರು ಮಾಡಿದರು. ರಾಜನ ಮಗನು ಮೈನಾವತಿಯೊಡನೆ ಲಗ್ನವಾಗಬೇಕೆಂದು ಮಾಡಿದ್ದನು. ಆದರೆ ಅವಳ ಲಗ್ನ ಮತ್ತೊಬ್ಬನಕೂಡ ಆಗಿಹೋಯಿತು.
ಮೈನಾವತಿಯನ್ನು ಕರೆಯಲು ಅವರ ಮಾವ ಬಂದನು.
ಒಬ್ಬ ಆಳುಮನುಷ್ಯನು, ರಾಜನ ಮಗನು ಕಳಿಸಿದ ಚೀಟಿಯನ್ನು ಸಾಹುಕಾರನ ಮನೆ ಬಾಗಿಲಿಗೆ ಅಂಟಿಸಿ ಹೋಗುತ್ತಾನೆ.