ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಲವಯ್ಯ ಶೆಟ್ಟಿ

ಶೆಟ್ಟಿ ಅದೇ ಊಟ ಮುಗಿಸಿ, ಎಲೆ ಅಡಿಕೆ ಮೆದ್ದು ಅಣಿ ಗೊಳಿಸತೊಡಗಿದ್ದಾನೆ. ಪ್ರಯಾಣದ ಸಿದ್ಧತೆಯೆ೦ದು ತೋರುತ್ತದೆ.

ರುದ್ರಾಕ್ಷಿ ಪೇಟೆಯ ಧೋತರ ಉಟ್ಟಿದ್ದಾನೆ. ಅವೆಂಥವೋ ಚಮ್ಮಳಿಗೆ ಮೆಟ್ಟಿದ್ದಾನೆ. ಬೆರಳಲ್ಲಿ ಉಂಗುರ. ಎದೆಯ ಮೇಲೆ ಸಜ್ಜೇದ ಚೌಕ, ಕೈಯಲ್ಲಿ ತಂಬುಲದ ಚೀಲು. ಅದೆಲ್ಲ ಘಟ್ಟದ ಸಾರಿಗೆಯ ಸಿಂಗಾರ. ಕರೀಯೆತ್ತಿಗೆ ಕಮಲದ ಹೂ. ಬಿಳಿಯೆತ್ತಿಗೆ ಗೆಜ್ಜಿಸರ. ಸಾರಂಗದೆತ್ತಿಗೆ ಸರಗಂಟಿ ಕಟ್ಟಿದ್ದಾನೆ.

ಬಟ್ಟಲಲ್ಲಿ ಉಂಡು, ತೊಟ್ಟಲಲ್ಲಿ ಆಡುವ ತಂಗಿಯನ್ನು ಬಿಟ್ಟು ಶೆಟ್ಟಿ ಮಲ್ಲಾಡ ದೇಶಕ್ಕೆ ಹೊರಟಿದ್ದಾನೆ. ಅಂಗಳದಲ್ಲಿ ಆಡಿ, ಗಂಗಾಳದಲ್ಲಿ ಉಣ್ಣುವ ತಂಗಿಯನ್ನು ಬಿಟ್ಟು ಶೆಟ್ಟಿ ಘಟ್ಟದ ಸಾರಿಗೆಗೆ ಹೊರಟಿದ್ದಾನೆ.

ಶುಂಠಿ, ಮೆಣಸು, ಯಾಲಕ್ಕಿ, ಲವ೦ಗ ಇವುಗಳನ್ನೆಲ್ಲ ಹೇರು ಹೇರು ಖರೀದಿ ಮಾಡಿದ್ದಾನೆ. ಉತ್ತತ್ತಿ, ಅಡಿಕೆ ಎರಡೆರಡು ಹೇರು ಖರೀದಿ ಮಾಡಿದ್ದಾನೆ. ತನ್ನ ಕರಿ ಎತ್ತು, ಬಿಳಿ ಎತ್ತು, ಸಾರಂಗದ ಎತ್ತುಗಳ ಮೇಲೆ ಆ ಹೇರುಗಳನ್ನೆಲ್ಲ ಹೇರಿಕೊಂಡು ಘಟ್ಟ ಇಳಿದು ಬಯಲುನಾಡಿಗೆ ಬಂದನು. ಬರುವಾಗ ದಾರಿಯಲ್ಲಿ ವಿಜಯನಗರವನ್ನು ದಾಟಿ ಬಾದಾಮಿಗೆ ಬಂದು ಸಂಗನಬಸವನ ಗುಡಿಯ ಮುಂದೆ ತನ್ನ ಹೇರು ಇಳಿಸಿ, ವಿಶ್ರಾಂತಿಗಾಗಿ ತ೦ಗಿದನು. ಅಲ್ಲಿಯ ಪೇಟೆಯಲ್ಲೆಲ್ಲ ಅಡ್ಡಾಡಿ, ಕೊಂಡುಕೊಳ್ಳಬೇಕಾದುದನ್ನು ಕೊಂಡುಕೊಂಡು ಬರುವಾಗ ಅಲ್ಟೊಬ್ಬ ಥಾಟಗಿತ್ತಿಯನ್ನು ಕಂಡನು. ಆಕೆ ಬಾದಾಮಿಪೇಟೆಯ ಬಸವಿ.

ಶೆಟ್ಟಿ ಊರು ಬಿಟ್ಟು ಹನ್ನೆರಡು ವರ್ಷವಾಗಿತ್ತು. ಮನಸ್ಸು ಚಂಚಲವಾಯಿತು, ಶೆಟ್ಟಿ ಆ ಥಾಟಗಿತ್ತಿಗೆ ಹೇಳಿಕಳಿಸಿದನು.

ತುಂಬಿಸೂಸುವ ಬೆಳದಿಂಗಳಿನಲ್ಲಿ ಇಂಬಾದ ಸೆಳೆಮಂಚ; ದಿಂಬಿಗೊರಗಿ ಮಲಗಿದ್ದಾಳೆ ಆ ಬಸವಿ. ಶೆಟ್ಟಿಯಾದರೋ ಸಿಂಗಾರವನ್ನೇ ಉಟ್ಟು, ಸಿ೦ಗಾರವನ್ನೇ ತೊಟ್ಟು ಆ ಬಸವಿಯ ಮನೆಗೆ ಹೋದನು.

ಆದರೆ ವಿಧಿಯು ಅಲ್ಲೊಂದು ಬೇರೆ ಆಟ ಹೂಡಿದೆ.

ಶೆಟ್ಟಿ ಬಸವಿಗೆ ಎಲೆಕೊಡಹೋದನು. ಅಡಿಕೆ ಕೊಡಹೋದನು. ಕೊಡ