ವಿಷಯಕ್ಕೆ ಹೋಗು

ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೭

ಕಳ್ಳನ ಮಗಳು

ತಾಯಿಗೊಬ್ಬ ಮಗ ಇದ್ದನು. "ಗಳಿಸಿಕೊಂಡು ಬರುತ್ತೇನೆ. ರೊಕ್ಕ ತರುತ್ತೇನೆ. ನೂರು ರೂಪಾಯಿಕೊಡು" ಎಂದು ಮಗನು ತಾಯಿಗೆ ಕೇಳುತ್ತಾನೆ. "ಮಗನೇ, ನೀನು ಮೊದಲೇ ಮರುಳ. ನೀನು ಗಳಿಸುವುದು ಸುಳ್ಳು ಸುಮ್ಮನೇ ಮನೆಯಲ್ಲಿ ಕುಳಿತುಕೊಳ್ಳಬಾರದೇ"- ಎಂದು ಅವ್ವ ಹೇಳಿದಳು. ಆದರೂ ಒತ್ತಾಯ ಮಾಡಿದ್ದರಿಂದ ತಾಯಿ ರೊಕ್ಕ ಕೊಟ್ಟು ಕಳುಹಿಸುತ್ತಾಳೆ.

ಹಾದಿಯಲ್ಲಿ ಒಬ್ಬ ಹುಡುಗನು ಸೀಸೆಯಲ್ಲಿ ನೀರುಹಾಕಿ ಅದರೊಳಗೆ ಕಪ್ಪೆ ಬಿಟ್ಟು ಓಡಾಡಿಸುತ್ತಿದ್ದನು. ಮಗನು ಆತನಿಗೆ ನೂರು ರೂಪಾಯಿಕೊಟ್ಟು ಸೀಸೆ ತೆಗೆದುಕೊಂಡು ಮನೆಗೆ ಬಂದನು. ತಾಯಿ ಸಿಟ್ಟಿಗೆ ಬಂದು ಸೀಸೆ ಒಡೆದುಬಿಟ್ಟಳು. ಕಪ್ಪೆ ಜಿಗಿಯಲಿಕ್ಕೆ ಹತ್ತಿತು. ಕಪ್ಪೆ ಅಂದಿತು. "ನನ್ನನ್ನು ನೀರೊಳಗಿಂದ ಹೊರಗೆ ಹಾಕಿದೆ. ನಾನು ಹೇಗೆ ಇರಲಿ? ನನ್ನನ್ನು ಒಂದು ಭಾರಂಗ ಬಾವಿಯಲ್ಲಿ ಬಿಡು. ಹಾಗೆ ಮಾಡಿದರೆ ನಾನು ನಿನಗೆ ಎರಡು ಬಂಗಾರಲಾಲ ಕೊಡುತ್ತೇನೆ." ಸೆಲ್ಲೆಯೊಳಗೆ ಕಪ್ಪೆ ಸುತ್ತಿಕೊಂಡು ಹೋಗಿ ಬಾವಿಯೊಳಗೆ ಬಿಟ್ಟನು. ಕಪ್ಪೆಯು ಆತನಿಗೆ ಎರಡು ಬಂಗಾರಲಾಲ ಕೊಟ್ಟು ನೀರಲ್ಲಿ ಜಿಗಿಯಿತು. ಬಂಗಾರದ ಲಾಲಗಳನ್ನು ತೆಗೆದುಕೊಂಡು ಆ ತಾಯಿಯ ಮಗನು ಮನೆಯ ಹಾದಿ ಹಿಡಿದನು.

ಕಪ್ಪೆಯು ಆತನಿಗೆ ಬಂಗಾರದ ಲಾಲಗಳನ್ನು ಕೊಡುವಾಗ ಒಬ್ಬ ಕಳ್ಳನು ಕಣ್ಣಿಟ್ಟಿದ್ದನು. ಮಗನು ಮನೆಗೆ ಹೊರಟಾಗ ಕಳ್ಳನು ಅವನ ಬೆನ್ನು ಹತ್ತಿಬಿಟ್ಟನು. ಆ ಕಳ್ಳನ ಕೈಯೊಳಗಿಂದ ಹೇಗೆ ಪಾರಾಗಬೇಕೆನ್ನುವುದೇ ಅವನಿಗೆ ದಿಗಿಲು ಹಿಡಿದಿತ್ತು. ಸರಕ್ಕನೇ ಓಡಿಬಂದು ಹತ್ತಿಪ್ಪತ್ತು ಜನರಿದ್ದಲ್ಲಿ ಹೋಗಿ ಕುಳಿತನು. "ಯಾಕಪ್ಪ ಈತ ಹೀಗೇಕೆ ನನ್ನ ಬೆನ್ನ ಬಿಡವೊಲ್ಲದಾಗಿದ್ದಾನೆ" ಎಂದು ಬಾಯಿ ಹೊಲಿದುಕೊಂಡು ಕುಳಿತಾಗ ಕಳ್ಳನು ಆ ಹತ್ತುಮಂದಿ ಮುಂದೆ ಬಂದು ಹೇಳುತ್ತಾನೆ.

"ಈ ಹುಡುಗನಿಗೆ ನನ್ನ ಮಗಳನ್ನು ಕೊಟ್ಟಿದೆ. ಒಲ್ಲೆನೆಂದು ಓಡಿ ಹೊರಟಿದ್ದಾನೆ. ನೀವಾದರೂ ಇವನಿಗೆ ಬುದ್ಧಿ ಹೇಳುವಂತಿದ್ದರೆ ಹೇಳಿರಿ."