ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಮ್ಯಕಥೆಗಳು

೫೧

"ಗಂಡನಾಡಿದ ಸೊಲ್ಲು ಆಕೆಯ ಕಿವಿಯನ್ನು ಕೊರೆದು ಎದೆಯಲ್ಲಿಳಿದು ಅದನ್ನು ಗಾಯಗೊಳಿಸಿತು. ತನ್ನನ್ನು ಪರೀಕ್ಷಿಸುವ ಸಲುವಾಗಿಯೇ ಇಂಥ ಮಾತು ಆಡಿರಬಹುದೇ - ಎಂದು ದಿಗಿಲುಬಿದ್ದು ನಿಟ್ಟುಸಿರಿಡುತ್ತ ಮರುನುಡಿದಳು - "ಮನ್ಮಥನಂಥ ಪತಿ ನೀವಾಗಿರುವಾಗ ಇನ್ನಾರನ್ನು ಕೂಡಲಿ? ಇಂಥ ಮಾತು ನಿಮ್ಮ ಬಾಯಲ್ಲಿ ಬಂದುದಾದರೂ ಹೇಗೆ?"

ಮಲ್ಲಣ್ಣನು ತನಗೊದಗಿದ ಧರ್ಮಸಂಕಟವನ್ನು ಬಿಚ್ಚಿ ಹೇಳಿ ಹೆಂಡತಿ ಸಮ್ಮತಿಸುವಂತೆ ಮಾಡಿದನು. ಇದೆಂಥ ತ್ಯಾಗ ಇಬ್ಬರದು? ಮಹಾತ್ಮಾಗ, ತ್ಯಾಗದ ತ್ಯಾಗ!

ಗಂಡಹೆಂಡಿರಿಬ್ಬರು ಮಲಗುವ ಕೋಣೆಯನ್ನು ಸಾಧ್ಯವಾದ ಸಲಕರಣೆಗಳಿಂದ ಅಣಿಗೊಳಿಸಿದರು. ಸಡಗರದ ಆ ಮಂಚ. ಅದರ ಅಂಚುಗಳಲ್ಲಿ ಕಣ್ಣು ಕೋರಯಿಸುವ ದೀಪಗಳು. ಆ ಬಳಿಕ ಕಲ್ಲಣ್ಣನನ್ನು ಕರೆತಂದು ದೂರದಿಂದಲೇ ತೋರಿಸಿದನು - "ಅದೇ ಆ ಸೂಳೆಯ ಮನೆ" ಎಂದು.

ಮಂಚವನ್ನೇರಿ ಕುಳಿತು ಕಲ್ಲಣ್ಣನು ಅತ್ಯಂತ ಪ್ರೀತಿಯಿಂದ, ಹತ್ತಿರಕ್ಕೆ ಬಾಯೆಂದು ಚೆಲುವೆಯನ್ನು ಕರೆದನು. ಆಕೆ ಹಾಗೆ ಮಾಡುವ ಮೊದಲು ದೀಪದ ಕಾಳಿಕೆಯನ್ನು ಕಳೆಯಲು ಉಜ್ಜುಗಿಸಿದಳು. ಆ ಸಂದರ್ಭದಲ್ಲಿ ಆಕೆಯ ಮುಖವನ್ನು ಕೊರಳನ್ನು ಚೆನ್ನಾಗಿ ನೋಡಿ ಆತನಿಗೆ ಸಂಶಯವೇ ಉಂಟಾಯಿತು - "ಈಕೆ ಸೂಳೆ ಅಲ್ಲ । ಯಾರೋ ಗೃಹಿಣಿ!! ಕೆಲಸ ಕೆಟ್ಟಿತು!!!" ಎಂದು ತಲ್ಲಣಿಸುತ್ತ, ತನ್ನ ತಪ್ಪಿಗೆ ಇನ್ನಾವ ಪ್ರಾಯಶ್ಚಿತ್ತ ಎಂದುಕೊಳ್ಳುವಷ್ಟರಲ್ಲಿ, ಮೂಲೆಯಲ್ಲಿ ತೂಗಹಾಕಿದ ಕತ್ತಿ ಗುರಾಣಿಗಳು ಕಾಣಿಸಿಕೊಂಡವು. ಆಗಂತೂ ಕಲ್ಲಣ್ಣನ ಕೈಕಾಲೇ ಹೋದವು. "ಇದು ಮಲ್ಲಣ್ಣನ ಮನೆಯೇ?" ಎಂದು ನಿರ್ಧರಿಸಿ, ಒಡಹುಟ್ಟಿದ ತಂಗಿಯ ಮೇಲೆ ಮನಸ್ಸು ಮಾಡಿದ ಪಾಪಿ ತಾನೆಂದು, ಚಕ್ಕನೇ ಮಂಚದಿಂದಿಳಿದು ತೂಗ ಹಾಕಿದ ಕತ್ತಿಯನ್ನು ಕೈಗೆ ತೆಗೆದುಕೊ೦ಡವನೇ ಕತ್ತಿನ ಮೇಲೆ ಹೊಡಕೊಂಡನು.

"ಅಯ್ಯಯ್ಯೋ, ಇದೇನಾಯಿತು? ಬೆಳಗಾಗುವ ಹೊತ್ತಿಗೆ ನನ್ನ ರಾಜ ಬಂದು ನನ್ನ ಪ್ರಾಣತೆಗೆದುಕೊಳ್ಳುವುದು ಖಂಡಿತ" ಎಂದು ಬಗೆದಳು. "ಅವನು ಬಂದು ತನ್ನ ಪ್ರಾಣತೆಗೆದುಕೊಳ್ಳುವ ಮೊದಲೇ ನಾನು ನನ್ನ ಪ್ರಾಣಕಳಕೊಳ್ಳುವುದು ಸುಗಮದಾರಿ" ಎಂದುಕೊಂಡು ಅಲ್ಲಿ ಬಿದ್ದ ಕತ್ತಿಯಿಂದ ತನ್ನನ್ನು ತುಂಡರಿಸಿಕೊಂಡಳು.

ಬೆಳಗಿಗೆ ಬಂದು ಮಲ್ಲಣ್ಣ ನೋಡಿದರೆ ಎರಡು ಹೆಣಗಳು! ನಚ್ಚಿನ ಗೆಳೆಯ ಮೆಚ್ಚಿನ ಹೆಂಡತಿ ಇಬ್ಬರೂ ಸತ್ತುಬಿದ್ದಿದ್ದಾರೆ. ಕೈಕಾಲು ತಣ್ಣಗಾದವು.