ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಾಲ್ವರು ಅಣ್ಣತಮ್ಮಂದಿರು

ನಾಲ್ದರು ಅಣ್ಣತಮ್ಮಂದಿರಿದ್ದರು. ಅವರದು ಸಾಹುಕಾರ ಮನೆತನ. ಸಾಲಿ ಓದಿದ್ದರು. "ಈಸು ದಿನ ನಾವು ಸಲುಹಿದೆವು. ಇನ್ನು ತಮ್ಮ ಹಾದಿ ತಾವು ಹಿಡೀಲಿ" ಎಂದು ತಾಯ್ತಂದೆಗಳು ನಾಲ್ಕೂ ಮಕ್ಕಳಿಗೆ ನಾಲ್ಕು ಸಾವಿರ ರೂಪಾಯಿ ಮತ್ತು ನಾಲ್ಕು ಕುದುರೆ ಕೊಟ್ಟು ಕಳಿಸಿದರು. ಅವರೆಲ್ಲ ಎಕ್ಕೀಹಳ್ಳಿಗೆ ಹೋದರು. ಸಿನೀಮಾ ನೋಡು, ಹೋಟೆಲ ನೋಡು ಎಂದು ಎಲ್ಲ ರೊಕ್ಕ ಖರ್ಚುಮಾಡಿ ಹಾಕಿದರು. ದುಡ್ಡುಗಳಿಸಹೊಂಟವರು ಎಲ್ಲ ರೊಕ್ಕ ಖರ್ಚುಮಾಡಿದಾಗ ಕೋಟೆಗೆ ಹೋದರು.

ಅಲ್ಲಿ ನೌಕರಿ ಹುಡುಕಿದರು. ಹತ್ತೆಂಟು ಕಡೆ ಓಡಾಡಿದರು. ಅಲ್ಲಿ ರಾಜನದೊಂದು ತೋಟವಿತ್ತು. ಅದಕ್ಕೆ ದೊಡ್ಡದೊಂದು ಹುಲಿ ಹತ್ತಿತ್ತು. ರಾತ್ರಿ ಹೊತ್ತು ಬೆಳೆಯನ್ನೆಲ್ಲ ಹಾಳುಮಾಡುತ್ತಿತ್ತು. ಎಷ್ಟೋ ಮಂದಿ ಕಾವಲುಮಾಡಿದರೂ ಉಪಯೋಗವಾಗಲಿಲ್ಲ. ಯಾರಾರಿಂದಲೂ ಹುಲಿ ಕೊಲ್ಲುವದು ಆಗಲಿಲ್ಲ. ಅದು ನಿಮ್ಮಿಂದ ಆಗಬೇಕು—ಎಂದು ರಾಜ ಹೇಳಿದನು. ನಾಲ್ಕು ಮೇರೆಗೆ ನಾಲ್ಕು ಮಂದಿ ಅಣ್ಣತಮ್ಮಂದಿರು ಅಲ್ಲೇ ಕಾವಲಿಗೆ ನಿಂತರು.

ಹಿರಿಯ ಅಣ್ಣ ಉಳಿದವರಿಗೆಲ್ಲ ಮಲಗಿಸಿ ತಾನು ಎಚ್ಚರಿದ್ದನು. ಗಡ ಗಡ ಎಂದು ಹುಲಿ ಬಂತು. ಹಿರಿಯಣ್ಣ ಛಕ್ಕನೆ ಎದ್ದುನಿಂತು ಶಾಲು ಹೊದ್ದು ಕೊಂಡು ಹುಲಿ ಬಾಯಲ್ಲಿ ಕೈಕೊಟ್ಟು ಹೊಡೆದನು. ಅದು ಸತ್ತುಚಿತ್ತು. ಆಗ ಎರಡನೇ ತಮ್ಮನನ್ನು ಎಬ್ಬಿಸಿದನು. ಅವನು ಎಚ್ಚರಿದ್ದಾಗ—ಕಳ್ಳರು ಓಡೋಡಿ ಅಲ್ಲಿ ಬಂದರು. ಪರಪರ ಎಂದು ನೆಲ ಕೆದರಿದರು. ತಂದ ರೊಕ್ಕ ಎಲ್ಲ ಹೊದರಿನಲ್ಲಿ ಬರುಕಿದರು. ಹಾಗೇ ತಗ್ಗು ಮುಚ್ಚಿ ಸಾಪಮಾಡಿದರು. ಹೊರಟುಹೋದರು. ಅದನ್ನೆಲ್ಲ ಜಪ್ಪಿಸಿ ಎರಡನೆಯವ ನೋಡಿದನು.

ಮೂರನೆಯವನಿಗೆ ಎಬ್ಬಿಸಿದರು. ಏಳು ಹೆಡೆ ನಾಗೇಂದ್ರ ಬಾಯೊಳಗೆ ಮಾಣಿಕ ಹಿಡಿದು ಹರಿಯದೂರ ಮೇಯುತ್ತ ಭುಸ್‌ ಎಂದು ಬುಸಗುಟ್ಟುತ್ತ ಹೋಯಿತು. ನಾಲ್ಕು ತಲವಾರ ತಕ್ಕೊಂಡು ಮಾಣಿಕದ ಮೇಲೆ ಕತ್ತರಿ ಮಾಡಿಟ್ಟು ಕತ್ತರಿಸಿದನು. ಆರು ಹೆಡೆಗಳೆಲ್ಲ ಕಡಿದುಬಿದ್ದವು. ಇನ್ನೊಂದು ಹೆಡೆ ಉಳಿಯಿತು.