ವಿಷಯಕ್ಕೆ ಹೋಗು

ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೭೧
ತಿರುಮಂತ್ರ

ಮಕರ ಸಂಕ್ರಮಣದ ಕಾಲಕ್ಕೆ ಸೊಲ್ಲಾಪುರದಲ್ಲಿ ಸಿದ್ಧರಾಮೇಶ್ವರನ ಜಾತ್ರೆ ಆಗುತ್ತದೆ. ಆ ಕಾಲಕ್ಕೆ ಸುತ್ತಲಿನ ಹತ್ತಿಪ್ಪತ್ತು ಹರದಾರಿಗಳಿಂದ ಜನರು ಬಂದು ಸೇರುತ್ತಾರೆ. ದೇವರಿಗಾಗಿ ಬರುವವರೂ ಅಷ್ಟೇ. ವ್ಯಾಪಾರಕ್ಕಾಗಿ ಬರುವವರೂ ಅಷ್ಟೇ. ಏತಕ್ಕಾಗಿ ಅಲ್ಲಿಗೆ ಹೋದರೂ ಅಲ್ಲಿ ನಡೆಯುವ ಮನೋರಂಜನೆಯ ಅನೇಕ ಕಾರ್ಯಕ್ರಮಗಳನ್ನು ನೋಡಿ ತಣಿಯುತ್ತಾರೆ. ಆದ್ದರಿಂದ ಹಾಡಿಕೆ, ಬಂದಲಾಟ, ತೊಟ್ಟಿಲು ತೂಗಾಟ, ಚಿರಿಕೆಗಾಣ ಮೊದಲಾದ ಸೌಕರ್ಯಗಳನ್ನು ಸ್ಥಳಿಕರು ಜಾತ್ರೆಗೆ ಬಂದವರಿಗೆ ಒದಗಿಸುತ್ತಾರೆ. ಹಾಗೂ ಕಲಾವಿದರಿಗೆ ಊಟವಸತಿಗಳನ್ನು ಕಲ್ಪಿಸಿಕೊಡುವರಲ್ಲದೆ, ಸಂಭಾವನೆಯನ್ನೂ ಅವರವರ ಯೋಗ್ಯತೆಗೆ ತಕ್ಕಷ್ಟು ಕೊಟ್ಟು ಮರ್ಯಾದಿಸುವರು.

ಒಂದು ಹಳ್ಳಿಯ ಲಾವಣಿಕಾರನೊಬ್ಬನು ಹೆಗಲಿಗೊಂದು ಡಪ್ಪ ಬಗಲಿಗೊಂದು ತುಂತೂನಿ ಸಿಕ್ಕಿಸಿಕೊಂಡು ಸೊಲ್ಲಾಪುರಕ್ಕೆ ಹೊರಟನು. ಹೊತ್ತೇರುವವರೆಗೆ ದಾರಿ ನಡೆದು, ಬದಿಯಲ್ಲಿ ಕಾಣುವ ಕಂಚೇಮರದ ನೆರಳಲ್ಲಿ ಬಿಸಿಲು ಕಳೆದು ಮುಂದೆ ಸಾಗಬೇಕೆಂದು ನಿರ್ಧರಿಸಿದನು. ತಣ್ಣಗಿನ ನೆರಳಿನಲ್ಲಿ ತಾಸರ್ಧತಾಸು ಉರುಳಾಡಿದ ಮೇಲೆ ದಣಿವು ಹಗುರಾದಂತಾಯಿತು. ಎದ್ದು ಕುಳಿತು ಮೇಲೆ ನೋಡಿದರೆ ಇನ್ನೂ ಬಿಸಿಲು ಬಹಳ. ಬಿಸಿಲು ತಗ್ಗಿದ ಮೇಲೆ ಹೊರಟರಾಯಿತೆಂದು ಬಗೆದನು. ಆದರೆ ಅಲ್ಲಿಯವರೆಗೆ ಏನು ಮಾಡುವದು? ಅವನ ಕಾಯಕ ಇದ್ದೇ ಇತ್ತು.

ತುಂತೂನಿಯನ್ನು ಕೈಗೆ ತೆಗೆದುಕೊಂಡು, ಸ್ವರಕಟ್ಟಿ ತನ್ನ ಲಾವಣಿಯ ಪುನರಾವರ್ತನೆಗೆ ತೊಡಗಿದನು. ತುಂತೂನಿ ಒತ್ತಟ್ಟಿಗೆ ಲಾವಣಿ ಒತ್ತಟ್ಟಿಗೆ ಸ್ವರವೂ ಕೂಡುವಂತಿಲ್ಲ. ಲಾವಣಿಕಾರನು ಕಿವಿಕಿತ್ತಿದ ಆಡಿನಂತೆ ಹಲಬುತ್ತಿದ್ದಾನೆ. ಆ ಅಪಸ್ಟರಗಾಯನವನ್ನು ಕೇಳಲಿಕ್ಕಾಗದೇ, ಕಂಚೇಮರದಲ್ಲಿ ವಾಸವಾಗಿದ್ದ ದೆವ್ವ ಬಂದು ಲಾವಣಿಕಾರನಿಗೆ ಬೇಡಿಕೊಂಡಿತು—"ಬಿಸಿಲು ಹೊತ್ತಿನಲ್ಲಿ ಹಾಡುವುದು ಬೇಡ. ತಲೆನೋಯತೊಡಗಿದೆ. ನಿಲ್ಲಿಸು."