ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 46 -

ಇದಾದ ಎರಡು ದಿನಗಳ ಬಳಿಕ ಶಿವಾಜಿಯು ರಾಜಸಿಂಹನನ್ನು ಕರೆಯಿಸಿ “ನಮ್ಮ ಸೈನಿಕರೆಲ್ಲರು ಮಾರ್ಗಾಯಾಸದಿಂದ ಮೊದಲೇ ಬಳಲಿದ್ದರು. ಇಲ್ಲಿನ ಹವೆಯು ನಮಗೆ ಹಿತಕರವಾಗುವುದಿಲ್ಲ. ಹಾಗೂ ನೀರೂ ಗಾಳಿಯೂ ನಮ್ಮೆಲ್ಲರ ಆರೋಗ್ಯವನ್ನು ಕೆಡಿಸಿರುವುವು. ಏನಾದರೂ ಪ್ರಮಾದ ಸಂಭವಿಸಿದರೆ, ನಾವು ಡಿಲ್ಲಿಗೆ ಬಂದುದೇ ಅಯೋಗ್ಯವಾಯಿತು ಎಂದು ತಿಳಿಯಬೇಕಾಗುವುದು. ನಮ್ಮ ಸೈನಿಕರೆಲ್ಲರು ನಮ್ಮ ದೇಹವನ್ನು ನೆರಳಿನಂತೆ ಹಿಂಬಾಲಿಸುವರು. ಆದರೂ ಅವರನ್ನೆಲ್ಲ ಊರಿಗೆ ಕಳುಹಿಸದೆ ನಿರ್ವಾಹವಿಲ್ಲ. ನಾವು ಅವರನ್ನೆಲ್ಲ ಹಿಂದಕ್ಕೆ ಕಳುಹಿಸಬೇಕೆಂದು ನಿಶ್ಚೈಸಿರುವೆವು. ಅವರಿಗೆ ಬಾದಶಹರ ಹೆಸರಿನಲ್ಲಿ 'ರಹದಾರಿಗಳನ್ನು' ಕೊಡಿಸಬೇಕಾಗಿ ಅಪೇಕ್ಷಿಸುತ್ತೇವೆ" ಎಂದು ಹೇಳಿದನು. ರಾಜಸಿಂಹನು ಬಾದಶಹನಿಗೆ ಶಿವಾಜಿಯ ಪ್ರಾರ್ಥನೆಯನ್ನು ಅರಿಕೆ ಮಾಡಿದನು. ಅವರಂಗಜೀಬನು ಆ ಪ್ರಾಸ್ತಾಪಕ್ಕೆ ಒಪ್ಪಿದನು. ಶಿವಾಜಿಯ ಆಪ್ತ ಅನುಚರರಲ್ಲದೆ ಮಿಕ್ಕವರೆಲ್ಲರು ಯಜಮಾನನ ನಿರ್ಬಂಧದಿಂದ ಊರಿಗೆ ಮರಳಿದರು.

ಸೈನಿಕರೆಲ್ಲರು ಹಿ೦ದೆರಳಿದ ಬಳಿಕ ಶಿವಾಜಿಯು ಮೈಯಲ್ಲಿ ಸ್ವಸ್ಥವಿಲ್ಲ ಎಂದು ಹಾಸಿಗೆ ಹಿಡಿದು ಮಲಗಿದನು. ಶಿವಾಜಿಯ ಅಸುಸ್ಥತೆಯ ಸುದ್ದಿಯು ಏನಾಗುವುಲ್ಲಿಯಲ್ಲೆಲ್ಲಾ ಹಬ್ಬಿತು ಜನರು ಶಿವಾಜಿಯನ್ನು ನೋಡುವುದಕ್ಕೆ ಗುಂಪು ಗುಂಪಾಗಿ ಶಿಬಿರಕ್ಕೆ ಬಂದರು. ಯಾರನ್ನೂ ಮನೆಯೊಳಕ್ಕೆ ಬಿಡದಂತೆ ಶಿವಾಜಿಯು ಆಜ್ಞೆ ಮಾಡಿದ್ದನು. ರಾಜಸಿಂಹನಿಗೂ ಮುಅಜಮನಿಗೂ ಹೊರತು ಮಿಕ್ಕವರಿಗೆ ಶಿವಾಜಿಯನ್ನು ನೋಡುವುದಕ್ಕೆ ಅಪ್ಪಣೆಯಿರಲಿಲ್ಲ. ಇವರಿಬ್ಬರು ಸಹ ಶಿವಾಜಿಯು ನಿಜವಾಗಿ ಅಸ್ವಸ್ಥನಾಗಿರುವನೋ ಇಲ್ಲವೊ ಎಂದು ಸರಿಯಾಗಿ ತಿಳಿಯದೆಹೋದರು. ಶಿವಾಜಿಯ ಆಸ್ವಸ್ಥದಿಂದ ಎಲ್ಲರೂ ದುಃಖಿತರಾದರು. ಶಿವಾಜಿಯ ಕ್ಷೇಮವನ್ನು ಎಲ್ಲರೂ ವಿಚಾರಿಸುತ್ತಿದ್ದರು. ಶೈಲಿನಿಯು ತನ್ನ ತಂದೆಯು ಮನೆಗೆ ಬಂದ ಕೂಡಲೇ ಅದೇ ಪ್ರಶ್ನೆಯನ್ನು ಮಾಡುವಳು. ಶಿವಾಜಿಯು ಹೇಗಿರುವನೆಂದು ನೋಡುವುದಕ್ಕೆ ಅವಳ ಪ್ರಾಣವು ತುಡಿದುಕೊಳ್ಳುತ್ತಲಿತ್ತು. ಗುಪ್ತವೇಷದಿಂದ ಅವನಿದ್ದಲ್ಲಿಗೆ ಹೋಗುವೆನೆಂದು ಒಂದು ಸಲ ಯೋಚಿಸಿದಳು. ಒಡನೆ ತನ್ನನ್ನು ಯಾರಾದರೂ ಗುರುತಿಸಿದರೆ, ತನ್ನ ಅವಸ್ಥೆಯೂ ಅನ್ಯರ ಅವಸ್ಥೆಯೂ