ಪುಟ:ಕಂಬನಿ-ಗೌರಮ್ಮ.pdf/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೪

೮-೧೦-೩೦

ಮದುವೆ! ಮದುವೆಯೆಂದರೆ ಎಷ್ಟು ಮಂದಿ ಸಂತೋಷದಿಂದ ಹಿಗ್ಗುವರು; ಸುಖದ ಹೆದ್ದಾರಿ ಮದುವೆಯಂತೆ! ನಿಜವೇ ?

ತಾವು ಪ್ರೀತಿಸುವವರನ್ನು ಪಡೆದ ವಧುಗಳಿಗೆ ನಿಜವಿರಬಹುದು. ನನಗೆ?..ಆದರೆ ನನಗೆ? ಮದುವೆಯೆಂದರೆ ಸಾಯುವದಕ್ಕಿಂತಲೂ ಕಷ್ಟವಾಗಿ ತೋರುವದೇಕೆ? ಯಾರೊಡನೆ ಕೇಳಲಿ ? ಕೇಳಿದರೂ ಹೇಳುವವರಾರು? ದೇವರನ್ನು ಬೇಡಲೇ ? ದೇವರಿದ್ದರಲ್ಲವೆ ಬೇಡುವುದು? ಇದುದಾಗಿದ್ದರೆ..ಅಯ್ಯೋ ದೇವರನ್ನೇಕೆ ದೂಷಿಸಲಿ? ಅಣ್ಣನಿಗೆ ದಯವೇ ಇಲ್ಲವೇಕೆ ? ಯಾರನ್ನು ಮೊರೆಹೋಗಲಿ? ಅಮ್ಮನಂತೂ ಈ ಲೋಕದಲ್ಲೀಗ ಇಲ್ಲ.-ಅಕ್ಕ? ಅಕ್ಕನ ಮಾತು ಕೇಳುವವರಾರು? ಅವನು ವರನಾಗದ ಮದುವೆಯಲ್ಲಿ ನಾನು ವಧುವಾಗುವದು ಹೇಗೆ ? ಅವನೇನು ತಿಳಿದುಕೊಳ್ಳುವನು? ನಿನ್ನೆ ದಿನ ಬಂದಿರುವ ಅವನ ಕಾಗದವನ್ನು ಒಡೆಯಲೇ ? ಧೈರ್ಯಬರುವುದಿಲ್ಲವೇಕೆ ? ಏನಾದರೂ ಇರಲಿ, ಓದಿಬಿಡುವೆನು.. ಅಯ್ಯೊ. .ಅವನು ಬರೆದಿರುವುದೇನು ? ನನ್ನ ಮುಂದಿನ ಜೀವನವು ಸುಖ ಸಂತೋಷಪೂರ್ಣವಾಗಿರಲೆಂದು ದೇವರಲ್ಲಿ ಅವನ ಬೇಡಿಕೆಯಂತೆ! ಸುಖ! ಸಂತೊಷ ! ಎಂತಹ ಹಾಸ್ಯಾಸ್ಪದ.. ಅವನಿಲ್ಲದ ಮೇಲೆ ಸುಖವೇ ? ಅವನೂ ನನ್ನನ್ನು ತಿಳಿಯಲಾರನೇನು ? ಹೇಗವನನ್ನು ಮರೆಯಲಿ! ಅಂದಿನ ಸಾಯಂಕಾಲ....ನಾವ ತಿರುಗಾಡಲು ಹೋದ ಸಾಯಂಕಾಲ....ಅದನ್ನು ಮರೆಯುವುದು ನನ್ನಿಂದ ಸಾಧ್ಯವೇ ? ಮಲ್ಲಿಗೆಯ ಹೂವನ್ನು ಕೊಯಿದು ನನ್ನ ಕೈಲಿಟ್ಟು, 'ಕಾಗದ ಬರೆಯುತ್ತಿರು' ಎಂದು ಹೇಳುವಾಗ ಚಿತ್ರಿತವಾದ ಅವನ ಸ್ನೇಹಪೂರ್ಣವಾದ ಮುಖ, ಪ್ರೇಮವನ್ನು ಹೊರಚೆಲ್ಲುತ್ತಿದ್ದ ಕಣ್ಮಗಳು.. ಅದೆಲ್ಲವನ್ನೂ ಹೇಗೆ ತಾನೆ ನನ್ನ ಹೃದಯದಿಂದ ಹೊರದೂಡಲಿ?..ಅಯ್ಯೋ - ಅವನ ಕಾಗದಗಳು. . ಪ್ರತಿ ಶಬ್ದದಿಂದ ಉಕ್ಕುತ್ತಿರುವ ಪ್ರೇಮ..ಹೀಗಾಗುವುದೆಂದು ಯಾರಿಗೆ ತಿಳಿದಿತ್ತು? ನನಗೇಕೆ ಹುಚ್ಚು ಹಿಡಿಯುವುದಿಲ್ಲ!