ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೨೮

ವಿಕಿಸೋರ್ಸ್ದಿಂದ
(ಪುಟ:ಗೌರ್ಮೆಂಟ್ ಬ್ರಾಮ್ಮಣ.pdf/೨೮ ಇಂದ ಪುನರ್ನಿರ್ದೇಶಿತ)
ಈ ಪುಟವನ್ನು ಪ್ರಕಟಿಸಲಾಗಿದೆ

೧೨

ಗೌರ್ಮೆಂಟ್ ಬ್ರಾಹ್ಮಣ

ನಾಳಿನ ಕಸದ ಪಾಳಿ : ಮಾಲಕತ್ತಿ

ನಮಸ್ಕರಿಸಿದಂತೆ ನಿಮ್ಮ ಹಿಂಗೈಗಳನ್ನು ಪರಸ್ಪರ ಒಂದಕ್ಕೊಂದು ಮುಟ್ಟಿಸಿ, ಆಮೇಲೆ ಒಂದರಿನ್ನೊಂದರ ಮಧ್ಯೆ ಬೆರಳುಗಳನ್ನು ಸೇರಿಸಿ. ಆಯಿತೆ? ಈಗ ನಿಮ್ಮ ಬಲಗೈ ಬೆರಳುಗಳು ಎಡಗೈ ಅಂಗೈಯಲ್ಲಿ. ಎಡಗೈ ಬೆರಳುಗಳು ಬಲಗೈ ಅಂಗೈಯಲ್ಲಿ ಬಂದಿವೆ ತಾನೇ? ಸರಿ. ಈಗ ಭೂಮಿಗೂ ನಿಮ್ಮ ಕಾಲುಗಳಿಗೂ ಸಾಕಷ್ಟು ಅಂತರವಿರುವಂತೆ ಎತ್ತರದ ಗೋಡೆಯ ಗೂಟಕ್ಕೆ ತೂಗು ಹಾಕಿಸಿಕೊಳ್ಳಿ. ಹಾಕಿಸಿಕೊಂಡಿರಾ? ಊ ಹು, ಹಾಗಲ್ಲ, ನಿಮ್ಮ ಬಿಡಿಸದ ಕೈಗಳ ಬೆರಳಿನ ಮಧ್ಯ ಗೂಟ ಬರಬೇಕು. ಹುಂ ಹಾಗೆ, ಸರಿ. ಹೀಗೆ ತೂಗಿದರೆ ಎಷ್ಟು ಕಾಲ ನೀವು ಕಣ್ಣುಗಳಲ್ಲಿ ನೀರು ತಾರದೆ ತೂಗಬಹುದು?

ಪ್ರಾಥಮಿಕ ಶಾಲೆ ಓದುವಾಗ ನನಗೆ ಸಿಕ್ಕ ಶಿಕ್ಷೆ ಇದು. ಅಲ್ಲಲ್ಲ..... ನನ್ನಂತೆ ನನ್ನ ಕೇರಿಯ ಸ್ನೇಹಿತರೂ ಉಂಡಿದ್ದಾರೆ. ಹೀಗೆ ತೂಗು ಹಾಕಿದಾಗ ಕೈಗಳನ್ನು ಜಾರಿಸಿ ನೆಲಕ್ಕೆ ಬೀಳಲೂ ಬರುತ್ತಿರಲಿಲ್ಲ. ಅಳಬೇಕು, ಗೋಗರೆಯಬೇಕು. ಕಾಡಿ ಬೇಡಿದರೂ ಪ್ರಯೋಜನವಿರುತ್ತಿರಲಿಲ್ಲ. ನಾವು ಗೋಗರೆದಷ್ಟು ನಮ್ಮ ಗುರೂತ್ತಮರಿಗೆ ಹಲ್ಲು ಕಡಿಯುವಷ್ಟು ಕೋಪ ಬರುತ್ತಿತ್ತು. ಕೈಯಲ್ಲಿ ನುಣುಪಿಲ್ಲದ ಉದ್ದನೆಯ ಬಡಿಗೆ, ಗೋಡೆಗೆ ಮುಖ ಮಾಡಿ ಗೂಟಕ್ಕೆ ತೂಗು ಹಾಕಿದ ಮೇಲೆ ಅವರಿಗೆ ಹೊಡೆಯಲು ಸಿಕ್ಕುವುದು ಉಬ್ಬಿನಿಂತ ನಮ್ಮ ಕುಂಡೆಯ ದಡಗಳು.

"ಸೂಳೆ ಮಗನ ಕುಂಡೆಂದರ ತಬಲಾ ಆಗ್ಯಾವ ನೋಡ ಸಾಲಿ ಉಪ್ಪಿಟ್ಟು ತಿಂದು ತಿಂದು........" ಎನ್ನುವುದು, ಬಾರಿಸುವುದು

ಕೆಲವೊಮ್ಮೆ ಕುಂಡೆಯ ದಡಗಳನ್ನು ಬಿಜಾಪುರದ ಜೋಡು ಗುಮ್ಮಟಕ್ಕೆ ಹೋಲಿಸುತ್ತಿದ್ದರು. ಅವರು ನಮಗೆ ತಿನ್ನಲು ಹಾಕುವ ಉಪ್ಪಿಟ್ಟಿಗಿಂತ ಮನೆಗೊಯ್ಯುವುದೇ ಹೆಚ್ಚಿರುತ್ತಿತ್ತು.

ನಾವು ತೊಡುವ ಚೊಣ್ಣಗಳಿಗೆ ಗುಂಡಿಯೇ ಇರುತ್ತಿರಲಿಲ್ಲ. ಇದ್ದರೂ ಪ್ರಯೊಜನವಿರುತ್ತಿರಲಿಲ್ಲ. ಒಂದು ಚೊಣ್ಣದ ನಡದ ಸುತ್ತಳತೆಯಲ್ಲಿ, ನನ್ನಂಥ ನಾಯಿ ಸೊಂಟದವರು ಸಲೀಸಾಗಿ ನಾಲ್ಕು ಜನ ಇಳಿಯಬಹುದಿತ್ತು. ಅವು ಪೊಲೀಸರ ಅರ್ಧ ತೊಡೆ ಕಾಣುವ ಚೊಣ್ಣಗಳು. ಅದಕ್ಕಾಗಿ ಆ ಚೊಣ್ಣ ಉಡುದಾರದ (ನಡುದಾರದ) ಆಸರೆಯನ್ನು ಪಡೆಯುತ್ತಿತ್ತು. ಇಲ್ಲವೇ ಸಣಬಿನಿಂದಲೋ, ಸೀರೆಯ ದಡಿಯಿಂದಲೋ ಬಿಗಿಯಲಾಗಿರುತ್ತಿತ್ತು.