- "ತಂದಿನ್ರಿಯವ್ವಾ"
- "ಏಟ ತಂದೀ, ಉಡೇದಾಗ ಸ್ವಲ್ಪ ಕಾಣಾವಲ್ಲಾ?"
- "ಇಲ್ಲಿಯವ್ವ, ಯಾಡ ಕಿಲೋ ಅದಾವರಿ"
- "ಯಾರಗೆರ ಗಡ್ಕರಿ ಕರಕೊಂಡು ಬಂದಿ ಇಲ್ಲ?
- ಇದೇನು ಇಟss ಹುಡುಗ್ಗ ಕರಕೊಂಡು ಬಂದಿಯಲ್ಲ
- ಇವನ ಏನು ಎಮ್ಮಿ ಹಿಡಿ ಸೂರ!"
- "ಇಲ್ಲರ್‍ರಿಯವ್ವಾ........ಅದೇನ ಹಿಡಿತದ
- ನಾ ಅದಿನಲ್ಲ ರಿ ಹಿಡಿತೀನಿ...........
- ನೀವೇನು ಬರೂದು ಬ್ಯಾಡ್ರಿ.......... ಕ್ವಾಣ ಬಿಡ್ರಿ......
ಅಷ್ಟರಲ್ಲಿಯೇ ಒಂದು ಗಂಡಸಿನ ಧ್ವನಿ ಹೊರಬಂತು, ಅಜ್ಜಿ ತನ್ನೊಳಗೇ ವಟಗುಟ್ಟತೊಡಗಿದಳು. ಬಂದವ, ಅಜ್ಜಿಯೊನ್ನೊಮ್ಮೆ ಎಮ್ಮೆಯನ್ನೊಮ್ಮೆ ನೋಡಿ ಆ ಹೆಂಗಸಿನೊಂದಿಗೆ ಏನೋ ಹೇಳುತ್ತ ಒಳಗೆ ಹೋದ. ಆಕೆಯೂ ಒಳಗೆ ಹೋದಳು. ಸ್ವಲ್ಪ ಸಮಯದ ನಂತರ ಆತ ಹೊರಬಂದ.
- "ನಮಸಗಾರ್‍ರಿಯಪ್ಪಾ -ಎಂದಳು ಅಜ್ಜಿ.
ಅಲ್ಲವ್ವಾ ಮುದುಕಿ ನಿನಗ ಈ ಮೊದಲೊಮ್ಮೆ ಬಂದಾಗ ಹೇಳಿದ್ದಿಲ್ಲ ಕ್ಯಾಣದ ಬೀಜಾ ಒಡಸಿವಿ,
- ಅದು ಎಮ್ಮಿ ಮ್ಯಾಲಿ ಬಿಡುದಿಲ್ಲ, ಮಟ್ಟಿಗಿ ಹಚ್ಚಿವಿ ಅಂತ ಹೇಳಿಲ್ಲಾ"
ಎಂದ. ಅಜ್ಜಿ ಯಾವ ಪರಿಯಲ್ಲಿ ಬೇಡಿಕೊಂಡರೂ ಪ್ರಯೋಜನವಾಗಲಿಲ್ಲ. ಅಜ್ಜಿಯ ಬಾಯಿ ಬೊಂಬಾಯಿ ಆಯಿತು. ಎಮ್ಮೆಯ ಹಗ್ಗವನ್ನೂ ನನ್ನಿಂದ ಕಸಿದು ಕೊಂಡವಳೇ, ಬಡಿಗೆಯಿಂದ ಎಮ್ಮೆಯ ಡುಬ್ಬಕ್ಕೆ ಹೇರಿದಳು. ಬೆದರಿದ ಎಮ್ಮೆ ಜಗ್ಗಾಡತೊಡಗಿತು. "ಹ್ವಾ...... ಹ್ವಾಂ............ ಎಂದು ಧ್ವನಿ ಮಾಡತೊಡಗಿತು ಎಮ್ಮೆ, ಅದಕ್ಕೆ ಪ್ರತ್ಯುತ್ತರವಾಗಿ ಒಳಗಿನ ಕೋಣವು "ಆ೦...... ಅಂ......" ಎಂದು ಸಂಭಾಷಣೆ ಆರಂಭಿಸಿತು ! ಆತ ಬಾಗಿಲು ಮುಚ್ಚಿಕೊಂಡು ಆಗಲೇ ಹೊರಟು ಹೋಗಿದ್ದ. ಎಮ್ಮೆ ಜಗ್ಗಾಡಿದರೂ, ಮಿಸುಕದ ಹಾಗೆ ಗಟ್ಟಿಯಾಗಿ ಹಿಡಿದುಕೊಂಡು ಮತ್ತೊಂದು ಹೇರಿದಳು ಎಮ್ಮೆಗೆ, ಎಮ್ಮೆ ಓಡತೊಡಗಿತು. ಅದರ ರಭಸಕ್ಕೆ ಅಜ್ಜಿಯೂ ಓಡತೊಡಗಿದಳು. ತಲೆ ಬಾಗಿಲಿಗೆ ಬಂದ ಕೋಣ ಸಾಕಿದ ಆ ಮನೆಯ ಜನ, ಅಜ್ಜಿ ಓಡುವುದನ್ನು ನೋಡಿ ಬಿದ್ದು ಬಿದ್ದು ನಗುತ್ತಿದ್ದರು. ಅಜ್ಜಿಯ ಬಾಯಿ ಎಮ್ಮೆಯ ಬಾಯಿ ಒಂದೇ ಆಗಿತ್ತು. ನನ್ನನ್ನೂ ಬಿಟ್ಟು ಓಡಿ ಹೊರಟಿದ್ದರಿಂದ, ನಾನು ಹೆದರಿ ಅಳತೊಡಗಿದೆ. ಅಜ್ಜಿ ನನಗೆ "ಬಾ" ಎಂದು ಕೈ ಮಾಡಿ ಕರೆಯುತ್ತ ಎಮ್ಮಯ ಹಿಂದೆ ಓಡುತ್ತಲೇ ಇದ್ದಳು.