ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೨

ಗೌರ್ಮೆಂಟ್ ಬ್ರಾಹ್ಮಣ


ಅಲ್ಲಿಂದ ಸರಿಸಿಬಿಡುತ್ತದೆ. ನಂತರ ತಾನೂ ಆ ಬಾಳೆಹಣ್ಣನ್ನು ತಿನ್ನದೆ ನೆಕ್ಕುತ್ತದೆ. ಹೆಣ್ಣು
ನೆಕ್ಕಿದ ಬಾಳೆಹಣ್ಣನ್ನು, ಈ ಮೇಲು ಜಾತಿಯ ಗಂಡು ಕಚ್ಚಿ ತಿನ್ನುತ್ತದೆ. ಇದು
ಸಂಪ್ರದಾಯದಲ್ಲಿ ಪ್ರಧಾನವಾದದ್ದು.

ಇಷ್ಟು ವಿಚಾರ ಸ್ನೇಹಿತ ನನಗೆ ಹೇಳಿದಾಗ, ಇಂಥ ಸಂಪ್ರದಾಯ ಒಟ್ಟುಗೂಡಿಸಿ
ಒಂದು ಪ್ರಬಂಧ ಬರೆಯಬೇಕು ಎನ್ನುವ ವಿಚಾರ ತಿಳಿಸಿದೆ. ಅದರಲ್ಲಿ ಆತನೂ ಅಷ್ಟೇ
ಆಸಕ್ತಿ ತೋರಿಸಿ ವಿಷಯ ಸಂಗ್ರಹಿಸಿ ಕೊಟ್ಟ. ಊರಿನವರು ಸಂಪ್ರದಾಯ ಇರುವ ದಿನವನ್ನು
ಹೇಳಿದರು. ಮಾರನೇ ದಿನ ಹೊರಡಲು ಸಿದ್ಧವಾದಾಗ ಅದು ನಿನ್ನೆಯ ದಿನದ ರಾತ್ರಿಯೇ
ಮುಗಿದುಹೋಗಿದೆ. ಈಗ ಜನಕ್ಕೆ ಅದರ ಬಗ್ಗೆ ಹೆಚ್ಚಿನ ಕಣ್ಣು ಇರುವುದರಿಂದ ಯಾರಿಗೂ
ಅರಿಯದ ಹಾಗೆ ಮಾಡಿ ಮುಗಿಸಿ ಬಿಡುವುದಾಗಿ ಹೇಳಿದರು. ಆದರೆ ಈ ಸಂಪ್ರದಾಯ
ಧಾರವಾಡ ಜಿಲ್ಲೆಯಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ. ಈ ಹಳ್ಳಿಗೆ ಮೊದಲು
"ತುಣ್ಣಗನೂರು" ಎಂದು ಹೆಸರಿತ್ತಂತೆ. ಜಾನಪದ ಅಧ್ಯಯನಕಾರನಾದ ನಾನು ಈ ವಿಚಾರದ
ಕುರಿತು ಪ್ರಬಂಧ ಬರೆಯಲಾಗಲಿಲ್ಲ. ಏಕೆಂದರೆ, ಅಧ್ಯಯನಕಾರರಲ್ಲಿ ಇಂಥ ವಿಷಯಗಳು
ಪಾಂಡಿತ್ಯ ಪ್ರದರ್ಶನಕ್ಕೆ ವಸ್ತುಗಳಾಗಿವೆ ಎನಿಸಿತು. ಆ ರೀತಿ ಬಾಳೆಹಣ್ಣು ತಿನ್ನಿಸುವುದು
"ಪ್ರಜನನದ ಸಂಕೇತ", ಓಕುಳಿ ವಿಚಾರಕ್ಕೆ "ಸಮೃದ್ಧಿಯ" ಅರ್ಥ ಕೊಡುವುದು, ಅರಿಶಿಣ
ಕುಂಕುಮಕ್ಕೆ ಇನ್ನೊಂದು ಬಗೆಯ ಅರ್ಥ. ಇಂಥವೆಲ್ಲಾ ಅರಿತ ಮೇಲೆ ಈ ಪಾಂಡಿತ್ಯದ
ಬಗ್ಗೆ ಹೇಸಿಕೆಯೂ ಎನಿಸಿ ಬರೆಯುವುದನ್ನು ನಿಲ್ಲಿಸಿಬಿಟ್ಟೆ.

ಇದೆಲ್ಲವೂ ಇಲ್ಲಿ ಯಾಕಾಗಿ ಕಥೆ ಮಾಡಿ ಹೇಳುತ್ತಿರುವನೆಂದರೆ ಮೇಲು
ಜಾತಿಯವರು ವರ್ಷಕ್ಕೊಮ್ಮೆ ಕೊಡುವ ಸೀರೆ-ಕುಪ್ಪಸ ದಲಿತ ಸ್ತ್ರೀಯರಲ್ಲಿ ಆಸೆ ಹುಟ್ಟಿಸಿವೆ.
ನನ್ನೂರಿನ ಸುತ್ತಮುತ್ತ ಇಂಥ ಸಂಪ್ರದಾಯ ಇನ್ನೂ ಜೀವಂತವಾಗಿವೆ. ಬದಲಾವಣೆ
ಬಹಳೆಂದರೆ ಎದೆಗೆ ಕುಪ್ಪಸ ತೊಡಿಸಿದ್ದಾರೆ ಎಂದು ಕೇಳಿದ್ದೇನೆ. ಮೊದಲ ಭಾಗದಲ್ಲಿ
ಹೇಳಲಾದ ನನ್ನ ಓದಿನ ಹಿಂದಿರುವ ಸ್ಥಿತಿಯನ್ನೇ ಗಮನಿಸಿ. ಬೆಳೆಯಬೇಕು ಎಂಬ ಜೀವಿಗೆ
ಸಣ್ಣ ಸಣ್ಣ ವಿಚಾರಗಳು ಹೇಗೆ ಅಡೆತಡೆ ತರುತ್ತವೆ ಎನ್ನುವುದು ಒಂದಾದರೆ, ಹೆಣ್ಣಿನ
ಶೀಲ ಹರಣ ಮಾಡಿ ವೇಶ್ಯೆಯಾಗಿಸಿ ಅವಳಲ್ಲಿಗೆ ಬರುವ ಗಂಡಸರು ತಮ್ಮ
ಮರ್ಯಾದೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಹೂಡುವ ತಂತ್ರಗಳನ್ನು ಗಮನಿಸಿದರೆ
ಆ ಹೆಣ್ಣುಗಳಿಗೆ ಮರ್ಯಾದೆ ಇಲ್ಲವೇ? ಎಂಬುದು ಎರಡನೆಯದು. ಸಂಪ್ರದಾಯದ
ಸೋಗಿನಲ್ಲಿ ಇಂದಿಗೂ "ಓಕುಳಿಯ ಈಸ್ಟ್‌ಮನ್ ಕಲರ್ ಚಿತ್ರ" ನೋಡುವ ಈ ಗಂಡಸರು
ತಮ್ಮ ಮಡದಿಯರನ್ನು ಈ ರೀತಿ ನಿಲ್ಲಿಸಿ ಬಹಿರಂಗವಾಗಿ ಆಡುತ್ತೀರಿಯೇ ಎಂದು
ಪ್ರಶ್ನಿಸಿದರೆ ಕಣ್ಣು ಕೆಕ್ಕರಿಸುತ್ತಾರೆ. ತಮ್ಮ ಮಡದಿಯಂತೆ ಇವರೂ ಮಾನವುಳ್ಳ ಹೆಂಗಸರು
ಎಂಬ ಭಾವನೆ ಇವರಿಗೆ ಬರುವುದಾದರೂ ಯಾವಾಗ? ಅಧ್ಯಯನಕಾರರ ಪಾಂಡಿತ್ಯ