ವಿಷಯಕ್ಕೆ ಹೋಗು

ಪುಟ:ದೀಕ್ಷೆ.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ದೀಕ್ಷೆ
375

ತಿತ್ತು.ಆ ಬೇಗೆಯಲ್ಲೆ ಬೆಂದು ತಾಯಿ ಅರೆ ಜೀವವಾಗಿದ್ದಳು. ಮಾತು ಮಾತಿಗೂ ಕೆರಳಿ ಸಿಟ್ಟಾಗುವ ಅಸಹನೆಯ ಮೂರ್ತಿಯಾಗಿದ್ದರು ತಂದೆ.

ಮುರಲೀಧರನೊಡನೆ ಒಲವು ತುಂಬಿದ ಧ್ವನಿಯಿಂದ ಒಬ್ಬರೂ ಅಲ್ಲಿ ಮಾತ ನಾಡಲಿಲ್ಲ, ಆರೋಗ್ಯವಾಗಿದೀಯೇನೋ?-ಎಂದು ತಾಯಿಯೊಮ್ಮೆ ಕೇಳಿದರು. ಅಷ್ಟೆ. ಊಟವಾಯ್ತೆ? ತಿಂಡಿಯಾಯ್ತೆ? ಸ್ನಾನವಾಯ್ತೆ? ಎಂದು ಒಮ್ಮೆಯೂ ಕೇಳಲಿಲ್ಲ ಅತ್ತಿಗೆಯರು.

ಮಗ ದೃಷ್ಟಿಗೆ ಬಿದ್ದೊಡನೆ ತಂದೆ ಕೇಳಿದರು:

"ಪರೀಕ್ಷೆಗೆ ಎಷ್ಟು ದಿನ ಇದೆ ಇನ್ನು?"

ಮಗನೆಂದ:

"ಮಾರ್ಚ್ ಮೊದಲ್ನೆ ವಾರ ಅಪ್ಪಾ."

ಮುಂದೇನೂ ಪ್ರಶ್ನೆ ಬರಲಿಲ್ಲವೆಂದು ಮುರಲೀಧರ ಯೋಚನೆಗೆ ಒಳಗಾದ. ತನ್ನ ಪತ್ರಗಳು ತಂದೆಗೆ ತಲಪಿಯೇ ಇಲ್ಲವೇನೋ ಎಂಬ ಸಂದೇಹ ಆತನಲ್ಲಿ ಮೂಡಿತು.

ಆದರೆ ಆ ರಾತ್ರೆಯೆ ಆಯಿತು ಸಂದೇಹ నిವಾರಣೆ.

ತಂದೆ ಕೇಳಿದರು:

"ಎಷ್ಟು ದಿನ ಇರ್ತೀಯಾ?"

ಮುರಲೀಧರನೆಂದ:

"ನಾಳೆಯೇ ಹೋಗ್ವೇಕು. ಫೀಸು ಕಟ್ಟೋಕೆ ಸೋಮವಾರವೇ ಕೊನೆಯ ದಿವಸ."

"ನಿನ್ನ ಅಣ್ಣಂದಿರನ್ನು ಕೇಳಿದಿಯಾ?"

“ಇల్ల."

“ಕೇಳು. ನನ್ನಲ್ಲೇನಿದೆ? ಈಗೆಲ್ಲಾ ಅವರದೇ ರಾಜ್ಯ..."

ಹತಾಶನಾದ ಮನುಷ್ಯನ ಉತ್ತರ. ಆದರೆ ಧ್ವನಿ ಮಾತ್ರ ಕಟುವಾಗಿಯೆ ಇತ್ತು.

ಹಿಂದೆ ಮುರಲೀಧರನ ವಿಷಯದಲ್ಲಿ ಹೆಚ್ಚಿನ ಆಸಕ್ತಿ ತೋರುತಿದ್ದ ಹಿರಿಯಣ್ಣ ಈ ಸಲ ಮೌನವಾಗಿದ್ದ. ತಮ್ಮನ ನಾಲ್ಕು ಮಾತುಗಳಿಗೆ ಆತ ಉತ್ತರವಾಗಿ ಕೊಟ್ಟದು ಒಂದೆ ಮಾತು.

“ಈವರೆಗೂ ನಾನು ಓದ್ತಾ ಬಂದಿರೋದು ನಿನ್ನ ಪೋತ್ಸಾಹದಿಂದಲೆ ಅಣ್ಣ."

“ಈಗ ನನ್ನಲ್ಲಿ ದುಡ್ಡಿಲ್ಲ."

"ಈ ವರ್ಷ ಓದಿದ್ದೆಲ್ಲ ವ್ಯರ್ಥವಾಗುತ್ತಲ್ಲಣ್ಣ. ನನ್ನ ಸ್ವಂತದ ಖರ್ಚಿಗೆ ನಾನು ದುಡ್ಡು ಕೇಳಿದ್ನೆ? ಪರೀಕ್ಷೆಗೆ-"

"ನನ್ನ ಹತ್ತಿರ ದುಡ್ಡಿಲ್ಲ ಅಂದೆ!”