ದೊಡ್ಡದೊಂದು ಕೆಲಸವನ್ನು ಮಾಡಿ ಮುಗಿಸಿದವರಂತೆ.
ಪಾಠದ ಬಳಿಕ ವಿದ್ಯಾರ್ಥಿಗಳು ಹೊರ ಹೋಗುತ್ತಿದ್ದಂತೆ ಕೆಲವರು ಮಹ ದೇವಯ್ಯನ ಕೈ ಕುಲುಕಿದರು. ಬೇರೆ ಕೆಲವರು, ಮುರಲೀಧರನಿಗೆ ಕೇಳಿಸುವಂತೆ ಕೀಟಲೆ ಮಾಡುವ ಧ್ವನಿಯಲ್ಲಿ ಅಂದರು:
“ಸಂಪಾದಕರು! ಸಂಪಾದಕರು!”
ಇಬ್ಬರೇ ಉಳಿದಾಗ ನಾರಣಪ್ಪನೊಡನೆ ಮುರಲೀಧರನೆಂದ:
“ರೀ, ನಿಮ್ಮ ಮೇಲೆ ನನಗೆ ಬಹಳ ಸಿಟ್ಟು ಬಂದಿದೆ.”
“ಹೌದೆ? ಯಾಕೆ?” ಎಂದು ನಾರಣಪ್ಪ ನಗುತ್ತ.
“ಇನ್ನೇನು ಮತ್ತೆ?”
“ಸುಮ್ನಿರಿ ಮುರಲಿ, ನಾನು ಸರಿಯಾದ್ದನ್ನೇ ಮಾಡಿದೆ.”
“ಏನೋಪ್ಪ...”
ಮನೆಯ ಕಡೆ ಹೊರಟಾಗ ನಾರಣಪ್ಪ ನಕ್ಕು ಹೇಳಿದ:
“ಮ್ಯಾಗಜೀನಿಗೆ ನಾನೊಂದು ಲೇಖನ ಕೋಡ್ತೀನಿ. ತಿರಸ್ಕರಿಸ್ಬೇಡೀಪ್ಪಾ....”
....ಮೊದಲು ವರ್ಷದ ಇಬ್ಬರು ಪ್ರತಿನಿಧಿಗಳು, ದ್ವಿತೀಯ ವರ್ಷದ ಕಲಾ ವಿಭಾಗದಿಂದ ಇನ್ನೊಬ್ಬರು, ಮುರಲೀಧರ ಮತ್ತು ಮಹದೇವಯ್ಯ-ಹೀಗೆ ಐವರ ಸಂಪಾದಕ ಮಂಡಲ ಕೆಲಸ ಆರಂಭಿಸಿತು.
"ಸಂಪಾದಕರೇ ಸಾಲದು.ಸ್ವತಃ ನೀವೂ ಬರೀಬೇಕುಎಂದರು ಶ್ರೀಕಂಠಯ್ಯ . ಅದು ಕಷ್ಟದ ಕೆಲಸವೆಂಬುದು ಹೆಚ್ಚಿನವರ ಅಭಿಪ್ರಾಯವಾಗಿತ್ತು. ಅದಕ್ಕೆ ಅಪವಾದವಾಗಿದ್ದವನು ಲಕ್ಷ್ಮೀಕಾಂತ. ಆತ ಕೇಳಿದ:
“ಕವಿತೆ ಎಷ್ಟು ಬೇಕಾಗಬಹುದು ಸಾರ್?”
“ಕನ್ನಡ ವಿಭಾಗದಲ್ಲಿ ನಾಲೈದು. ಇಂಗ್ಲಿಷ್ ವಿಭಾಗದಲ್ಲಿ ಒಂದೋಎರಡೋ,” ಎಂದರು ಶ್ರೀಕಂಠಯ್ಯ.
“ಆ ಕೆಲಸ ನನಗೆ ಬಿಟ್ಟಿಡಿ ಸಾರ್.”
“ಎಲ್ಲಿಂದ ತರ್ತೀಯಪ್ಪ?”
ಕಣ್ಣೆವೆ ಕೂಡ ಅಲುಗಿಸದೆ ಆತ್ಮ ವಿಶ್ವಾಸದಿಂದ ಲಕ್ಷ್ಮೀಕಾಂತನೆಂದ:
“ನಾನೇ ಬರೀತೀನಿ, ಇಂಗ್ಲಿಷ್ ಕನ್ನಡ ಎರಡರಲ್ಲ.”
ಶ್ರೀಕಂಠಯ್ಯನವರ ಕಣ್ಣುಗಳಲ್ಲಿ ತುಂಟತನದ ನಗೆ ಮಿನುಗಿದುದನ್ನು ಮುರಲೀ ಧರ ಗಮನಿಸಿದ.
ನೋಡೋಣ.ಬರೆದು ತಗೊಂಡ್ಬಾ.ಬೇರೆ ಕವಿಗಳೂ ಇದಾರೇನೋ ಹುಡುಕೋಣ
ಲಕ್ಷ್ಮೀಕಾಂತನ ಮೇಲೆ ಆ ಮಾತಿನಿಂದ ಯಾವ ಪರಿಣಾಮವೂ ಆಗಲಿಲ್ಲ.