ಕೊಚ್ಚೆ ನೀರಿನ ಜಲಪಾತ!
“ರೀ, ಮುರಲೀಧರ್! ರೀ! ಇದ್ದೀರೇನ್ರಿ ಒಳಗೆ"?”
ಬಾಗಿಲು ತಟ್ಟಿದವನು ಕೊನೆಯ ಕೊಠಡಿಯಾತ.
"ಬನ್ನಿ, ಇದೀನಿ" ಎನ್ನುತ್ತ ಮುರಲೀಧರ ಕದ ತೆರೆದ.
ಮಂಡಿಯಲ್ಲಿ ಹೊಸದಾಗಿ ಗುಮಾಸ್ತೆ ಕೆಲಸಕ್ಕೆ ಸೇರಿಕೊಂಡಿದ್ದ ವ್ಯಕ್ತಿ ಆತ. ಒಂಟಿಯಾಗಿದ್ದ ಯುವಕ. ಆತ ಹೊರಗೇ ನಿಂತು ಹೇಳಿದ:
"ದೀಪಾನೇ ಇಲ್ವಲ್ರಿ. ನೆಲವೆಲ್ಲಾ ನೀರೇ. ಏನಪ್ಪಾ ಇದು? ಜಲಪ್ರಳೆ ಯವೋ ಏನ್ಕತೆ?"
"ನನ್ನ ಕೊಠಡೀಲೂ ಅಷ್ಟೆ, ಸದ್ಯ ಮಳೆ ನಿಂತಿತಲ್ಲ!"
“ಬೆಂಕಿ ಪೋಟ್ಣಾ ಇದ್ದರೆ ಕೊಡಿ ನೋಡೋಣ. ಒಂದು ಮೋಂಬತ್ತಿ ಇದ್ದ ಹಾಗೆ ನೆನಪು ಎಲ್ಲಿದೆಯೋ ಹುಡುಕ್ಷೇಕು."
“ಇಲ್ವಲ್ರಿ..."
"ನನಗೊಂದು ಹುಚ್ಚು. ಸಿಗರೇಟು ಸೇದೋ ನನ್ನಲ್ಲೇ ಇಲ್ಲವೆಂದ ಮೇಲೆ ನಿಮ್ಮಲ್ಲಿರುತ್ತಾ?"
ಮುರಲೀಧರ ಸಣ್ಣನೆ ನಕ್ಕ. ಬಂದಿದ್ದವನು ಗೊಣಗುತ್ತ ಮನೆ ಮಾಲಿಕನನ್ನು ಶಪಿಸುತ್ತ ತನ್ನ ಕೊಠಡಿಗೆ ಹಿಂತಿರುಗಿದ.
...ನಿಂತ ಮಳೆ ಮತ್ತೆ ಬರಲಿಲ್ಲ.
ನೆಲದ ನೀರಿಗೆ
ಹರುಕು ಬಟ್ಟೆಯೊಂದನ್ನು ಅದ್ದಿ ಅದ್ದಿ ಮುರಲೀಧರ ಬಕಿಟಿಗೆ ಹಿಂಡಿದ. ಬಹಳ ಹೊತ್ತಿನ ಮೇಲೆ, ನೀರಿನ ಬದಲು ತೇವವಷ್ಟೆ ಉಳಿಯಿತು. ಪೆಟಿಗೆಯನ್ನು ಮೂದಲಿಗೆ ಸ್ಥಾನದಲ್ಲೇ ಇರಿಸಿ, ಆ ಜಾಗದಲ್ಲಿ ಚಾಪೆಯನ್ನು ಬಿಡಿಸಿದ.
...ನಿದ್ದೆ ಬಲು ದೂರವಿತ್ತು. ಮೂಳೆಗಳನ್ನೇ ಅಪ್ಪಿಕೊಂಡಿತ್ತು ಮೈಯನ್ನು ಹೊಕ್ಕಿದ್ದ ಚಳಿ.
ದಿನಚರಿ ಬರೆಯುವುದಾಗಲಿಲ್ಲ ಆ ರಾತ್ರೆ.
ಮುರಲಿಧರನೆಂದುಕೂಂದ;
'ಈ ಅನುಭವವನ್ನೆಲ್ಲ ತಾನು ಬರೆದಿಡಬೇಕು; ಬೆಳಗ್ಗೆ ಎದ್ದೋಡನೆಯೆ ಬರೆಯಬೇಕು.'
...ಹತ್ತಿಯ ಚಾದರವನ್ನು ಆದಷ್ಟು ಬಿಗಿಯಾಗಿ ಮೈಗೆ ಸುತ್ತಿಕೊಳ್ಳುತ್ತ ಮುರಲೀಧರ ಯೋಚಿಸಿದ.
'ಈ ದಿನದ ಈ ರಾತ್ರೆಯ ಅನುಭವದ ಟಿಪ್ಪಣಿಗೆ ತಲೆಕಟ್ಟು-ದೇವತೆಗಳ ಕಣ್ಣೇರು.'