ನೀರಿನಲ್ಲಿ ಅದ್ದಿ ತೆಗೆದಿರಿಸಿದ್ದ ಹಾಗಿತ್ತು ಊರು, ಮಾರನೆಯ ಬೆಳಗ್ಗೆ. ಬೀದಿ ಗಳು ನಿರ್ಜನವಾಗಿದ್ದುವು. ಅಲ್ಲಿ ಇಲ್ಲಿ ಮನೆಗಳಿಂದ, ಊರು ಹೆಂಚುಗಳೆಡೆಯಿಂದ, ಹೊಗೆ ಮೇಲಕ್ಕೆ ಮೆಲ್ಲನೆ ಏಳತೊಡಗಿತು,_ಮತ್ತೆ ಎಲ್ಲಿ ಮಳೆ ಸುರಿಯುವುದೋ ಎಂದು ಅಳುಕುತ್ತ. ನಾಲ್ಕಾರು ದೊಡ್ಡ ಮನೆಗಳ ಅಡುಗೆಯೊಲೆಯ ಚಿಮಿಣಿಗಳು ಜೀವ ತಳೆದುವು. ಹಾಲಿನ ಸೈಕಲುಗಳು ಟ್ರಿಣ್ ಗುಟ್ಟಿದುವು. ಗೂಡೆಯಲ್ಲೆ ಯಾವಾಗಲೂ ಪಾತ್ರೆಗಳನ್ನು ಹೊತ್ತು ತರುತ್ತಿದ್ದ ಹಾಲವ್ವನೂ ಮಂದಗಮನೆಯಾಗಿ ಬ೦ದಳು, ಎಡಗೈಯಿಂದ ಬುಟ್ಟಿಯನ್ನು ಆಧಾರಿಸುತ್ತಾ, ಬಲಗೈಯಿಂದ ಸೆರಗನ್ನು ಬಾಯಿಗೆ ಒತ್ತಿಕೊಳ್ಳುತ್ತಾ.
ಕೇಳಿ ಬಂದುದು ಮಾಮೂಲಿನ ಮಾತೇ.
“ಆಲು ಆಕಿಸ್ಕೊಳ್ರೆವ್ವಾ."
ಯಜಮಾನಿತಿ ಅಂದರು.
"ಬರೇ ನೀರು."
ಆಕೆಯ ಭುಜದ ಮೇಲಿಂದ ಮುಖ ತೋರಿಸಿ ಯಜಮಾನಾರೆಂದರು.
“ಮಳೇಲಿ ಎಮ್ಮೆ ತೋಯಿಸ್ಕೊಂಡ್ರೆನೋ, ಪಾಪ!"
ಗ೦ಡಸುಧ್ವನಿ ಕೇಳಿತೆಂದು ಹಾಲವ್ವನಿಗೆ ನಾಚಿಕೆಯಾಯಿತು.
"ಓಗಿ ಸೋಮಿ,ನೀವು..."
ಬೀದಿಯ ಮೂಲೆಯಿಂದ ಕೇಳಿಸಿತು ಉದಯರಾಗ.
"ಕೊತ್ತಮಿರಿ ಸೊಪ್ಪು, ಮೆಂತೇಸೊಪ್ಪು, ಮುಲ್ಲಂಗೀ..."
ತಾಳಬದ್ಧವಾದ ಲಯಬದ್ಧವಾದ ಪದೋಚ್ಚಾರ. ಹೆಜ್ಜೆ ಹೆಜ್ಜೆಗೂ ಕುಲುಕುತ್ತಿದ್ದ ಕ೦ಠ.
ಶೇಷಣ್ಣನವರ ವಠಾರದಿಂದ ತರಕಾರಿಯವಳಿಗೆ ಕರೆಬಂತು.
"ಏ ಕೊತ್ತಿಮಿರಿ ಸೊಪ್ಪು, ಬಾ ಇಲ್ಲಿ!"
ಮೂರು ಕಾಸಿನ ವ್ಯಾಪಾರ, ಎಂದಿನಂತೆಯೇ.
ಎಳೆಯ ಹುಡುಗರು ಅಂಗಳದ ಕೊಚ್ಚೆಯನ್ನು ದಾಟಿ ಬೀದಿಗಿಳಿದರು. ಅರಿವಿಲ್ಲದೆಯೇ ರಾತ್ರೆ ಸುರಿದುಬಿಟ್ಟಿತ್ತು ಮಳೆ. ಆದರೂ ಚರಂಡಿಯಲ್ಲಿ ನೀರಿತ್ತು, ಇಣಿಕಿ ನೋಡುವಷ್ಟು,ಇಳಿಯುವ ಸಾಹಸ ತೋರುವಷ್ಟು.ಬೀದಿ, ದೊಡ್ಡರಸ್ತೆಯನ್ನು ಸೇರಿಕೊಳ್ಳುವ ಮೂಲೆಯಲ್ಲಂತೂ, ಕಸಕಡ್ಡಿಗಳ ರಾಶಿಯನ್ನೇ ಎರಡು ಬದಿ ಗಳಿಗೂ ಚರಂಡಿ ಉಗುಳಿತ್ತು.
ಬೆಳಗ್ಗೆ ಬೇಗನೆದ್ದು ದಿನಚರಿಯ ಪುಸ್ತಕದೊಡನೆ ಹೊತ್ತುಕಳೆದ ಮುರಲೀಧರ, ಸೂರ್ಯರಶ್ಮಿ ಕಣ್ಣಿಗೆ ಬೀಳುವುದೇನೋ ಎಂದು ಹೊರಗಿಣಿಕಿ ನೋಡಿದ. ಮಂದ