ಪುಟ:ನವೋದಯ.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

363

ಯಾರಾದರೂ ಅದರ ಕಿವಿ ಹಿಂಡಿದ್ದರೆ ತಾನೆ?
ಸರಸರ ಸದ್ದು. ಸೀರೆಯ ಅಂಚು. ತನಗೆ ಪರಿಚಿತವಾದುದೇ. ಮಲಗಿದ್ದ
ಜಾಗಕ್ಕೆ ಆವರಣವಿದ್ದು, ಇತರರು ನೋಡಲು ಆಸ್ಪದವಿಲ್ಲದೆ___
"ಎಚ್ಚರವಾಯ್ತೇನ್ರಿ?"
“ಊಂ. . . "
[ತಾನು ರಾಗವೆಳೆಯುವುದು ನಂಜುಂಡಯ್ಯನಿಗೆ ಕೇಳಿಸಿದರೂ ಕೇಳಿಸಲಿ.
ಯಾರ ಹೆದರಿಕೆ?]
“ಏಳಿ."
ಮುದ್ದು ಮುಖ ಬಾಗಿ ತನ್ನನ್ನೇ ನೋಡುತ್ತಿತ್ತು. ಆ ತೋಳನ್ನು ಹಿಡಿದು
ತನ್ನೆ ಡೆಗೆ ಎಳೆದರೆ_
ಪಿಸುದನಿಯಲ್ಲಿ ಮಾತು:
“ಕಾಫಿ ಮಾಡಿಟ್ಟಿದಾರೆ, ಆರ್ಹೋಗ್ತಾ ಇದೆ.”
“ಊಂ . . . "
ಮುಖ ಮೇಲಕ್ಕೆ ಹೋಯಿತು. ಪಾದಗಳು ಚಲಿಸಿದುವು. ಸೀರೆಯ ಅಂಚನ್ನು
ಹಿಡಿದುಕೊಳ್ಳಲೆಂದು ಜಯದೇವ ಕೈ ಮುಂದಕ್ಕೆ ಚಾಚಿದ. ಆದರೆ ಹಿಡಿತಕ್ಕೆ ಏನೂ
ಸಿಗಲಿಲ್ಲ.
ಮೂರು ವರ್ಷಗಳಿಗೆ ಹಿಂದೆ ಒಮ್ಮೆ ಅಂಥದೇ ಹಗಲು...
ಎಷ್ಟು ಒಳ್ಳೆಯವರು ರಂಗರಾಯರ ಪತ್ನಿ ಸಾವಿತ್ರಮ್ಮ!
ಆಕೆ ಅಂದಿದ್ದರು:
'ಏಳಿ, ಬಚ್ಚಲು ಮನೆಗೆ ಹೋಗಿ ಮುಖ ತೊಳಕೊಂಡು ಬನ್ನಿ. ಕಾಫಿ
ಇಳಿಸಿದೀನಿ.'
ಕನ್ನಡಿಯಲ್ಲಿ ಮುಖ ನೋಡದೆಯೇ ತಾನು ತಲೆಗೂದಲು ಬಾಚಿಕೊಂಡುದನ್ನು
ಕಂಡು ಆಕೆಗೆ ಆಶ್ಚರ್ಯವಾಗಿತ್ತು.
ಸೊಗಸಾಗಿತ್ತು ಅವರು ಮಾಡಿದ್ದ ಕಾಫಿ.
ಆಕೆ ನೀಡಿದ್ದ ಆಹ್ವಾನವೊ?
'ಮನೆ ಮಾಡೋತನಕ ನಮ್ಮಲ್ಲೇ ಇದ್ಬಿಡಿ.'
ಜಯದೇವ ಈಗ 'ಮನೆಮಾಡಿದ್ದ.' ಸಾವಿತ್ರಮ್ಮ ಆ ಊರಲ್ಲಿ ಇರುತ್ತಿದ್ದರೆ,
ಅವರಿಗೆ ನಮಿಸಿ ಆಶೀರ್ವಾದ ಕೇಳುತ್ತಿದ್ದ. ಜತೆಯಲ್ಲೆ ಸುನಂದೆಯನ್ನು ಹೆಮ್ಮೆ
ಯಿಂದ ಕರೆದೊಯ್ಯುತ್ತಿದ್ದ. ಅವರಿರಲಿಲ್ಲ ಈಗ. ಆಗಿನ ಪ್ರಕರಣದಿಂದ ಎಷ್ಟೊಂದು
ನೊಂದಿರಬೇಡ ರಂಗರಾಯರು! ಅವರು ಕೊಡಗನೂರಿಗೆ ಹೂರಟು ಹೋದ ಮೇಲೆ
ಒಂದು ಕಾಗದವನ್ನೂ ಬರೆಯಲಿಲ್ಲ. ಬೆಂಗಳೂರಲ್ಲಿ ಅವರ ಮಗ ಅಳಿಯ ಇಬ್ಬರೂ
ಇದ್ದರು. ಸಾವಿತ್ರಮ್ಮನೂ ಅಲ್ಲಿಯೇ ಇದ್ದರೇನೋ. ರಂಗರಾಯರೂ ಆಗಾಗ್ಗೆ