೨೧೨
ಬಸವಣ್ಣನವರ ವಚನಗಳು ೮೨೫
ಅರಸು ಮುನಿದಡೆ ನಾಡೊಳಗಿರಬಾರದಯ್ಯಾ,
ಗಂಡ ಮುನಿದಡೆ ಮನೆಯೊಳಗೆ ಇರಬಾರದಯ್ಯಾ,
ಕೂಡಲಸಂಗಮದೇವಾ
ಜಂಗಮ ಮುನಿದಡೆ ನಾನೆಂತು ಬದುಕುವೆ ? ||೨೯||
೮೨೬
ರಚ್ಚೆಯ ನೆರವಿಗೆ ನಾಣುನುಡಿ ಇಲ್ಲದಿಹುದೆ ?
ಅದರಂತೆನಬಹುನೆ ಸಜ್ಜನ ಸ್ತ್ರೀಯ ?
ಅದರಂತೆನಬಹುದೆ ಭಕ್ತಿರತಿಯ ?
ಕರುಳಕಲೆ ಪ್ರಕಟಿತವುಂಟೆ,
ಕೂಡಲಸಂಗಮದೇವಾ ? ||೩೦||
೮೨೭
ಭೂತ ಒಲಿದು ಆತ್ಮನ ಸೋಂಕಿದ ಬಳಿಕ
ಭೂತದ ಗುಣವಲ್ಲದೆ ಆತ್ಮನ ಗುಣವುಂಟೆ ?
ಗುರುಕಾರುಣ್ಯವಾಗಿ ಹಸ್ತಮಸ್ತಕಸಂಯೋಗವಾದ ಬಳಿಕ
ಗುರುಲಿಂಗಜಂಗಮವೆ ಗತಿಯಾಗಿ ಇದ್ದೆ,
ಕೂಡಲಸಂಗಮದೇವಾ. ||೩೧||
೮೨೮
ಹಸಿವು, ತೃಷೆ, ನಿದ್ರೆ, ವಿಷಯಂಗಳ ಮರೆದೆ.
ನೀವು ಕಾರಣ !
ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಂಗಳ ಮರೆದೆ.
ನೀವು ಕಾರಣ !
ಪಂಚೇಂದ್ರಿಯ, ಸಪ್ತಧಾತು, ಅಷ್ಟಮದಂಗಳ ಮರೆದೆ.
ನೀವು ಕಾರಣ !
ಕೂಡಲಸಂಗಮದೇವಯ್ಯಾ,
ನಿಮ್ಮ ಶರಣರಿಗೆ ಅಪ್ಯಾಯನವಾದಡೆ
ಎನಗೆ ತೃಪ್ತಿಯಾಯಿತ್ತು. ||೩೨||