ಅತಿಯಾಗುತ್ತದೆ. ಇನ್ನೂ ಹೆಚ್ಚಾಗಿ ಸಂಪಾದಿಸಿ ಶೇಖರಿಸಬೇಕು ಎನ್ನುವ ಯುವಕ ಕೆಚ್ಚು ಇರುವುದಿಲ್ಲ. ಅದರ ಬದಲು ಇದ್ದುದನ್ನು ಭದ್ರಮಾಡಬೇಕು. ಸುಭದ್ರವಾದ ವಿಧಾನಗಳಿಂದ ಇದ್ದುದನ್ನು ಬೆಳೆಸುವುದಾದರೆ ಆಗಲಿ ಎನ್ನುವ ಹುಚ್ಚು ಹೆಚ್ಚಾಗುತ್ತದೆ. ಆದಕಾರಣ ಕೆಲಸದಲ್ಲಿ ಮಗ್ನನಾಗಲು ಪ್ರಯತ್ನಿಸುತ್ತಾನೆ. ಬಹುಪಾಲು ಆ ಯತ್ನದಲ್ಲಿ ಜಯಗಳಿಸುತ್ತಾನೆ. ಒಂದೆರಡು ವರ್ಷಗಳು ಕಳೆಯುವುದರೊಳಗೆ, ಹೆಚ್ಚುಹೆಚ್ಚಾಗಿ ಪೆಚ್ಚು ಪೆಚ್ಚು ತಪ್ಪುಗಳನ್ನು ಮಾಡುತ್ತಿರುವುದನ್ನು ಗಮನಿಸುತ್ತಾನೆ. ಇತರರಿಗೆ ಎಲ್ಲಿ ಇದು ಗೊತ್ತಾಗುವುದೋ ಎಂಬ ಆತಂಕವು ಕೊರೆಯಲಾರಂಭಿಸುತ್ತದೆ. ಇಂತಹ ಸ್ಥಿತಿಯಲ್ಲಿರುವ ಮುದುಕನಿಗೆ ಸಂಸಾರದಲ್ಲಿ ಆಘಾತವಾದರೂ ಆಯಿತು; ಸಮಾಜದಲ್ಲಿ ಮಾನ ಹೋಗುವ ಸಂದರ್ಭಗಳು ಒದಗಿದರೂ ಆಯಿತು ; ಅಥವಾ ತಾನು ಶೇಖರಿಸಿದ್ದುದು, ಷೇರುಪೇಟೆಯಲ್ಲಿ ಕರಗಿಹೋದರೂ ಆಯಿತು; ಆಗ ಆತಂಕವು ಉಲ್ಬಣಗೊಂಡು ಧೃತಿಗೆಡುತ್ತಾನೆ. ಇತರ ವಿಧದ ಮಾನಸಿಕ ಬೇನೆಗಳು ಆತಂಕದ ಬೆನ್ನು ಹತ್ತಿ ಮನಸ್ಸನ್ನು ಹರಿದಿಡುತ್ತವೆ. ಅರುಳೂ ಮರುಳು, ಹುಚ್ಚು ಬೆಪ್ಪು ಶಿವಲೀಲೆಗಳಾಗುವುದು ಈ ರೀತಿಯಲ್ಲಿ.
ಮುಪ್ಪಿನಲ್ಲಿ ತೀವ್ರಾತಂಕವು ಉಂಟಾಗುವುದು ವಿರಳವೇನಲ್ಲ. ತಾನು ಬಯಸಿದಂತೆ ತನ್ನ ಮಕ್ಕಳು ಮರಿಗಳೂ ಬಾಳಬೇಕು ಎಂದು ಎಲ್ಲರೂ ಆಸೆಪಡುವುದು ಸ್ವಾಭಾವಿಕ. ಬಯಸಿದಂತೆ ಬಾಳುವುದು ಸುಲಭ ಸಾಧ್ಯವಿದ್ದರೆ, ಭೂಲೋಕ ಎಂದು ಏಕೆ ಕರೆಯುತ್ತಿದ್ದರು ; ಸ್ವರ್ಗ ಎಂದೇ ಅನ್ನುತ್ತಿದ್ದರು. ಕೇಳಿದುದನ್ನು ನೀಡುವ ಕಲ್ಪವೃಕ್ಷವು ಅಲ್ಲಿ ತಾನೆ ಇದೆ ಎಂದು ಪುರಾಣಗಳು ಹೇಳುವುದು ! ಅಂದರೆ ಬಹಳಷ್ಟು ಮಂದಿ ಮುದುಕರು ಆತಂಕಕ್ಕೆ ಬಲಿಯಾಗಲೇ ಬೇಕು. ಮೊದಮೊದಲ ಹಂತದಲ್ಲೇ ಅಂತಹವರು ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತರಾದರೆ, ಯಾವುದು ಆತಂಕಕ್ಕೆ ಒಳಗಾಗಿರುವುದು ಎಂಬುದರ ವಿಶ್ಲೇಷಣೆಯನ್ನು ಮಾಡತೊಡಗಿದರೆ, ಆತಂಕವು ಕಡಿಮೆಯಾಗುತ್ತದೆ. ನೆಮ್ಮದಿಯೂ ಉಂಟಾಗುತ್ತದೆ. ಮುಪ್ಪಿನ ಆತಂಕಗಳಿಗೆ ಆಧ್ಯಾತ್ಮಿಕ ಅರಿವಿನ ಪ್ರಯತ್ನವು ಅತ್ಯುತ್ತಮ ಮಾನಸಿಕ ಚಿಕಿತ್ಸೆ. ಇಂತಹ ಆಧ್ಯಾತ್ಮಿಕ ಅರಿವು ಪೂರ್ಣ ಜ್ಞಾನಾರ್ಜನೆಯಿಂದ, ಕುಶಲಮತಿಗಳಲ್ಲಿ, ವಿಚಾರಪರರಲ್ಲಿ ಸಾಧ್ಯ. ಯಾವ ಸಮಾಜದಲ್ಲಿಯಾಗಲೀ ವಿಚಾರಪರರು ಅಲ್ಪಸಂಖ್ಯಾತರು. ಉಳಿದ ಬಹುಸಂಖ್ಯಾತರಿಗೆ ಪೂರ್ಣ ನಂಬುಗೆ ಮತ್ತು ಭಕ್ತಿ ಇವುಗಳೇ ಉತ್ತಮ ಮಾರ್ಗವಾಗಬಹುದು. ಆತ್ಮಕ್ಕಿಂತ ಅಧಿಯಾದ, ಆಧ್ಯಾತ್ಮಿಕದ ಕೂಟಸ್ಥವಾದ ಯಾವುದಾದರೂ ದೇವರಲ್ಲಿ ಸಂಪೂರ್ಣ ಶರಣಾಗತನಾದರೆ, ಆತಂಕದಿಂದ ವಿಮುಕ್ತನಾಗಬಹುದು. ದೇವರ ಮೇಲೆ ಹೊಣೆ