ಕೂದಲಿಗೆ ಕರೀ ಬಣ್ಣವನ್ನು ಹಚ್ಚಿಕೊಂಡು, ಯುವಕನಂತೆ ಶೃಂಗಾರ ಮಾಡಿಕೊಂಡು, ಮದನಮಸ್ತಿ ಲೇಹವನ್ನು ತಿನ್ನುತ್ತಾ ವಾಲಾಡಬಹುದು.
ಮುಪ್ಪಿಗರಿಗೆ ಆತಂಕವು ಸ್ವಾಭಾವಿಕವಾದುದು; ಅರುಳು ಮರುಳು ಸಹಜವಾದುದು ಎಂದಾಗ, ಪಂಚಾಂಗದ ವಯಸ್ಸಿನ ಲೆಕ್ಕದಿಂದಲ್ಲ. ವೈಯಕ್ತಿಕವಾದ ದೇಹದ ವಯಸ್ಸು ; ಹಾಗೂ ಮಾನಸಿಕ ವಯಸ್ಸು ಇವನ್ನು ಗಮನಿಸಬೇಕು.
ಮುದುಕಿಯರನ್ನು ಆತಂಕವು ಕಾಡುವಾಗ, ವಿಚಿತ್ರ ನಡತೆಗಳು ಕಾಣಬರುತ್ತವೆ. ಸಾಕಷ್ಟು ಬೇಸರ, ಮತ್ತು ದುಃಖವನ್ನು ಸಂಸಾರದಲ್ಲಿ ಇತರರಿಗೆ ಉಂಟು ಮಾಡುತ್ತದೆ.
'ನಮಸ್ಕಾರ ಮಾಡೇ, ಡಾಕ್ಟರಿಗೆ' ಎಂದಳು ಹಿರಿಯ ಮುತ್ತೈದೆ. ಧ್ವನಿಯು ಮೆದುವಾಗಿದ್ದರೂ ಸಿಡುಕಿನ ಛಾಯೆಯಿತ್ತು. ಇಪ್ಪತ್ತಮೂರು ಇಪ್ಪತ್ತನಾಲ್ಕರ ಪದವೀಧರೆ ಹೆಣ್ಣು ತಲೆ ತಗ್ಗಿಸಿಕೊಂಡು ಡಾಕ್ಟರ ಪಾದಗಳತ್ತ ಕೈ ಚಾಚಿ ನಮಸ್ಕರಿಸಿದಳು. 'ನನ್ನ ಸೊಸೆ, ಡಾಕ್ಟರೇ ! ಯೆಂಟನ ಹೆಂಡತಿ' ಎಂದು ಡಾಕ್ಟರಿಗೆ ಪರಿಚಯವನ್ನು ಮಾಡಿಸಿದಳು. ಮುತ್ತೈದೆ. 'ಹೌದೇನೇ, ತಾಯಿ, ನಮ್ಮ ಮನೆಗೆ ಭಾಗ್ಯಲಕ್ಷ್ಮಿಯಾಗಿ ಬಂದೆಯಮ್ಮ ತುಂಬಾ ಸಂತೋಷವಾಯಿತಮ್ಮ ನಿನ್ನ ನೋಡಿ; ಮುತ್ತೈದೆ ಸಾವಿತ್ರಿಯಾಗಿ, ಒಂದೆರಡು ಮಕ್ಕಳ ತಾಯಾಗಿ ಬಹುಕಾಲ ಹಿತವಾಗಿ ಬಾಳಮ್ಮ' ಎಂದು ಡಾಕ್ಟರು ಆದರದಿಂದ ಆಶೀರ್ವದಿಸಿದರು. ಸೊಸೆಯ ಮುಖದಲ್ಲಿ ಸಂತಸದ ಬೆಳದಿಂಗಳು ಹರಡಿತು. ಅತ್ತೆಗೂ ಇದು ಕಾಣಿಸಿತು.
'ಯಾರು ಯಾರೋ ಹೇಳಿದರು ಅಂತ ಈ ಹೆಣ್ಣನ್ನು ತಂದುಕೊಂಡೆ, ಡಾಕ್ಟರೇ ! ಆದರೆ ಈಗ ಅನುಮಾನ ಬರುತ್ತಾ ಇದೆ. ನಮ್ಮ ಯೆಂಟುವಿಗೆ ಅನ್ಯಾಯ ಮಾಡಿದೆನೇನೋ ಅಂತ. ಇವಳ ಹೆಗ್ಗತ್ತಿನಮೇಲೆ ಬಿಳಿ ಮಚ್ಚೆ ಇದ್ದ ಹಾಗಿದೆ ; ಸ್ವಲ್ಪ ಪರೀಕ್ಷೆಮಾಡಿ ನೋಡಿ,' ಎಂದಳು ಅತ್ತೆಮ್ಮ
'ಚೆನ್ನಾಗಿ ಪರೀಕ್ಷೆ ಮಾಡಿನೋಡಿ, ಡಾಕ್ಟರೇ, ಈ ಮನೆಗೆ ಕಾಲಿಟ್ಟ ಮೂರು ತಿಂಗಳುಗಳಿಂದ ಇದೇ ಮಾತನ್ನು ಅತ್ತೆಮ್ಮ, ಕಂಡವರೆದುರಿಗೆಲ್ಲಾ ದಿನಕ್ಕೆ ಎಂಟು ಹತ್ತು ಬಾರಿಯಾದರೂ ಲೊಟಕುತ್ತಲೇ ಇದ್ದಾರೆ. ಕಂಡ ಹೆಂಗಸರಿಗೆಲ್ಲಾ ಕತ್ತು ಬಗ್ಗಿಸಿ ತೋರಿಸಿ, ತೋರಿಸಿ, ನನಗೂ ತಲೆ ಚಿಟ್ಟು ಹಿಡಿದು ಹೋಗಿದೆ. ನೀವು ನೋಡಿ ಹೇಳಿದ ಮೇಲಾದರೂ ತೆಪ್ಪಗಿರುತ್ತಾರೇನೋ ಎಂಬ ಆಸೆ. ಮದುವೆಗೆ ಮುಂಚೆಯೇ ಬೇಕಾದ ಪರೀಕ್ಷೆಗಳನ್ನೆಲ್ಲಾ ಮಾಡಿಸಿ, ಮಾಡಿಕೋಬಾರದಾಗಿತ್ತೆ? ಈಗ ಯಾಕೆ ಹೀಗೆ ಮುಕ್ಕಬೇಕು, ನನ್ನ' ಎಂದು ಸೊಸೆಯೂ ಸಿಡುಕಿನಿಂದಲೇ ನುಡಿದಳು.