೧೦೩
ಮಗನೇ ಆ ಮಾತನ್ನೆತ್ತಿದಾಗ ಅವಳಿಗೆ ಸ್ವಲ್ಪ ಅಳುಕಾಯಿತು. ಮನಸ್ಸೂ ಅರುಳು ಮರುಳಾಗಿತ್ತು. ಮಗ ಅಂದುದನ್ನೇ ತಾನೂ ಎತ್ತಿ ಆಡಿದಳು. 'ಹೌದು ಕಣೋ ಮರಿ ! ಹಿಂದಿನ ಕಾಲದವರು ಹಾಗನ್ನುತ್ತಿದ್ದರು. ನಮ್ಮನೆ ಡಾಕ್ಟರಿದ್ದಾರೆ ನೋಡು, ಓದಿದವರು, ತಿಳಿದವರು, ಅನುಭವಸ್ಥರು; ಅವರೂ ಕೂಡ ಒಂದು ಸರ್ತಿ ಹೀಗೆ ಅಂದರು, ಕಣೋ !' ಎಂದು ಹೇಳಿದಳು. ಬಿಳಿ ಮಚ್ಚೆಯು ಮುಂದೆ ಬಿಳಿ ತೊನ್ನಾಗುತ್ತೆ ಎನ್ನುವ ಭ್ರಮೆಯು ಹೋಯಿತು. ಬಿಳಿ ಮಚ್ಚೆಯಿಂದ ಭಾಗ್ಯವು ಬರುತ್ತೆ ಎನ್ನುವ ಹೊಸ ಭ್ರಮೆಯು ಹಿಡಿದುಕೊಂಡಿತು. ಹೊಸ ಭ್ರಮೆಯಿಂದ ಸೊಸೆಯ ಪಾಡು ಎಷ್ಟೋ ಸುಧಾರಿಸಿದ ಹಾಗಾಯಿತು.
ಮುಪ್ಪಿನ ವಯಸ್ಸು ಮೂಡಿದಾಗ, 'ಯಾರಿಗೂ ನಾನು ಬೇಡ, ಗಂಡನಿಗೆ ಬೇಡ. ಮಕ್ಕಳಿಗೆ ಬೇಡ' ಎಂದನ್ನುವ ಜುಗುಪ್ಪೆಯು ಉಂಟಾಗುತ್ತದೆ. ಮುಂದೆ ನನ್ನ ಗತಿ ? ಎನ್ನುವ ಭಯವುಂಟಾಗುತ್ತದೆ. ಕಾರಣ ಆತಂಕವೂ ಮುತ್ತಿಕೊಳ್ಳುತ್ತದೆ; ಹೆಂಗಸರಲ್ಲಿ ಭಯ ಆತಂಕಗಳ ಚಲ್ಲಾಟವೇ ಅತ್ತೆಯ ಕಾಟಕ್ಕೆ ಮೂಲ ಪ್ರೇರಕ.
ವ್ರತಗಳು : ಪುರಾಣ ಪುಣ್ಯ ಕತೆಗಳು : ಮೊಮ್ಮಕ್ಕಳೊಂದಿಗೆ ದ್ವಿತೀಯ ಬಾಲ್ಯವನ್ನು ಕಳೆಯುವುದು, ಇವೇ ಇಂತಹ ಆತಂಕಕ್ಕೆ ಸೂಕ್ತವಾದ ಚಿಕಿತ್ಸಾ ಮಾರ್ಗಗಳು. ಇವುಗಳೊಂದಿಗೆ ಅಗತ್ಯವಾದ ಔಷಧಿಗಳನ್ನು ಬಳಸಬೇಕಾಗಬಹುದು.