ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಪ್ಯಾರನಾಯ್ಡ್ ಅವಸ್ಥೆಗಳು

೧೦೫

ಕಿವಿಯಲ್ಲಿ ಅವು ಸೇರಿಕೊಂಡು, ಸದಾಕಾಲವೂ ಏನನ್ನಾದರೂ ಹೇಳುತ್ತಿರುತ್ತವೆ. ಸ್ಪಷ್ಟವಾಗಿ ಕಿವಿಯ ಹತ್ತಿರವೇ ಮಾತನಾಡಿದ ಹಾಗೆ ಕೇಳಿಸುತ್ತೆ. ಯಾರೂ ಇರುವುದಿಲ್ಲ. ಅಂದ ಮೇಲೆ ಕಿವಿಯೊಳಗೇ ಯಾವುದೋ ಸೇರಿಕೊಂಡು ಕಾಡುತ್ತಿರಬೇಕು. ಕೇಳಿ ಕೇಳಿ ಹುಚ್ಚು ಹಿಡಿದು ಹೋಗುವಂತೆ ಆಗಿಬಿಟ್ಟಿದೆ, ಸಾರ್' ಎಂದ.

ಸ್ಪಷ್ಟವಾಗಿ ಮಾತನಾಡಿದ ಹಾಗೆ ಕೇಳಿಸುತ್ತದೆಯೋ? ಅಥವಾ ರೈಲ್ ಕೂಗಿದ ಹಾಗೆ ಗುಂಯ್‌ ಅಂತ ಬರೀ ಸದ್ದಾಗುತ್ತದೆಯೋ? ಕಿವಿಗಳಲ್ಲಿ ಗುಗ್ಗೆ ಕಟ್ಟಿಕೊಂಡರೂ ಹಾಗೆ ಶಬ್ದವಾಗುವುದುಂಟು' ಎಂದು ನುಡಿದೆ. ಹೇಗೇ ಇರಲಿ ಕಿವಿಗಳನ್ನು ಪರೀಕ್ಷೆ ಮಾಡಿ ನೋಡೋಣ' ಎಂದು ಹೇಳಿ ಪರೀಕ್ಷೆ ಮಾಡಿದೆ. ಹೊರ ಕಿವಿಗಳು ಸ್ವಚ್ಛವಾಗಿದ್ದವು. ಕಿವಿಯ ಡ್ರಂಗಳೂ ಸ್ಪಷ್ಟವಾಗಿ ಆರೋಗ್ಯವಾಗಿ ಕಾಣಿಸಿದುವು. 'ಏನಂತ ಹೇಳುತ್ತವೆ, ಕಲ್ಲಪ್ಪ' ಎಂದು ಸಹಾನುಭೂತಿಯಿಂದ ಕೇಳಿದೆ.

“ನೀನು ಷಂಡ, ನೀ ಗಂಡುಸಲ್ಲ, ಷಂಡ' ಎಂದು ಒತ್ತಿ ಒತ್ತಿ ಹೇಳುತ್ತವೆ,ಎಂದ.

ಸುಮಾರು ಐದಾರು ವರ್ಷಗಳಿಂದಲೂ ಉಬ್ಬಸದ ಚಿಕಿತ್ಸೆಗಾಗಿ, ಕಲ್ಲಪ್ಪ ನನ್ನ ಬಳಿಗೆ ಬರುತ್ತಿದ್ದ. ತೀರಾ ಸಣಕಲ ಶರೀರ ; ಸುಮಾರು ಆರಡಿ ಎತ್ತರ. ತುಂಬಾ ಬುದ್ಧಿವಂತನಲ್ಲದಿದ್ದರೂ ಮಡ್ಡಿಯೇನೂ ಅಲ್ಲ. ಕಾಲೇಜಿನ ಮೊದಲ ಮೆಟ್ಟಲನ್ನು ಹತ್ತಿ ಸಂಸಾರದ ಬೇಗೆಯಿಂದಾಗಿ, ಮುಂದುವರೆಯಲಾರದೆ, ಮೆಟ್ಟಲು ಇಳಿದಿದ್ದ. ಕಂಪನಿಯೊಂದರಲ್ಲಿ ನಾಲ್ಕುನೂರು ರೂಪಾಯಿಗಳ ಪಗಾರವನ್ನು ಪಡೆಯುತ್ತಿದ್ದ. ೩೬ ಪ್ರಾಯದ ಅವಿವಾಹಿತ. ಮುಪ್ಪಿನ ತಾಯಿತಂದೆಯರನ್ನೂ ಇದ್ದೊಬ್ಬ ತಮ್ಮನನ್ನೂ ಇವನೇ ಪೋಷಿಸಬೇಕಾಗಿತ್ತು. ಉಬ್ಬಸದ ಬೇನೆಯು ವರ್ಷಾಕಾಲವೂ ಕಾಡುತ್ತಿತ್ತು. ಬಾಲ್ಯದಿಂದಲೂ ಕಾಡುತ್ತಿತ್ತು. ಆರೋಗ್ಯವೂ ಆ ಕಾರಣದಿಂದ ಸಮರ್ಪಕವಾಗಿರಲಿಲ್ಲ. ವಾರಕ್ಕೆರಡು ದಿನ ಉಬ್ಬಸದ ಕಾರಣದಿಂದ ರಜ ಪಡೆಯುವಂತಾದರೆ, ಯಾರಿಗೂ ಬೇಸರವೇ ! ಕಂಪನಿಯವರು ಇವನ ದೇಹಸ್ಥಿತಿಯನ್ನು ಅರಿತಿದ್ದರು. ಆದರೆ ತುಂಬಾ ನಂಬಿಕಸ್ಥ ಮತ್ತು ದಕ್ಷನಾದುದರಿಂದ ಕಿರುಕುಳವನ್ನು ಕೊಡುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಅವ ಪುಣ್ಯಶಾಲಿ ಎನ್ನಬೇಕು.

ಉಬ್ಬಸಕ್ಕಾಗಿ ಚಿಕಿತ್ಸೆಯನ್ನು ಪಡೆದು ಹೆಚ್ಚು ಮಾತುಗಳನ್ನಾಡದೆ ಹೊರಟು ಹೋಗುತ್ತಿದ್ದ. ಆದರೆ ಇವತ್ತು ದವಾಖಾನೆಯಲ್ಲಿ ಹೆಚ್ಚು ಜನರು ಇರದಿದ್ದ