ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೧೦

ಮನಮಂಥನ

ಇಷ್ಟು ಸುರಸವಾಗಿ ಮಾತನಾಡುತ್ತಿದ್ದರೂ, ಕ್ಷಣಕ್ಕೊಮ್ಮೆ ಕಿಟಕಿಯ ಬಳಿಗೆ ಕಣ್ಣು ಹಾಯಿಸುತ್ತಿದ್ದ. ಬಾಗಿಲ ಕಡೆಗೆ ಎರಡು ಮೂರು ಬಾರಿ ದೃಷ್ಟಿಯನ್ನು ನೆಟ್ಟ ಚರಿತ್ರೆಯನ್ನು ಕತೆಯಂತೆ ಹೇಳುವ ಉದ್ಯೋಗದಲ್ಲಿ ಕಣ್ಣಿನ ಕರಪಲವು ಈ ರೀತಿ ಆಗುತ್ತಿರಬಹುದು ಎಂದುಕೊಂಡೆ. ಸ್ವಲ್ಪ ವಿಪರೀತ ವರ್ತನೆಯೇ ಅನ್ನಿ. ಆದರೂ ಮಿಕ್ಕಂತೆ ಸರಿಯಾಗಿಯೇ ಇದ್ದ. ತಲೆಕೂದಲು ಬಾಚಲ್ಪಟ್ಟಿರಲಿಲ್ಲ. ಹಾಕಿದ್ದ ಬಟ್ಟೆಗಳು ಕೊಳೆಯಾಗಿದ್ದುವು. ಕೊಠಡಿಯೂ ಅವ್ಯವಸ್ಥೆಯಲ್ಲಿತ್ತು. ಆದರೆ ಇವೆಲ್ಲಾ ಕಲೆಗಾರನ ಸಾಮಾನ್ಯ ವಾತಾವರಣ. ಹಾಗಾಗಿ ಆಗ ಬೇರೆ ಯಾವ ಅನುಮಾನಕ್ಕೂ ಎಡೆಮಾಡಿಕೊಡಲಿಲ್ಲ.

ಸಂಭಾಷಣೆಯು ಮುಗಿದ ಮೇಲೆ ನಾವಿಬ್ಬರೂ ಹೊರಡಲು ಎದ್ದೆವು. ಇಷ್ಟು ಬೇಗ ಹಿಂತಿರುಗಬೇಕಲ್ಲ ಎಂದು ನನಗನ್ನಿಸಿದರೂ, ಬ್ರಹ್ಮಯ್ಯನಿಗೆ ಬೇಜಾರು ಬರುವಂತೆ ಮಾಡಬಾರದು ಎಂದು ಎದ್ದಿದ್ದೆ. ಬಾಗಿಲು ದಾಟಿ ಹೊರಡುವಾಗ “ಗೇಟನ್ನು ಭದ್ರವಾಗಿ ಹಾಕಿಕೊಂಡು ಹೋಗಿ. ಇಲ್ಲದಿದ್ದರೆ ದಣ್ಣಾಯಕರ ಸಿಬ್ಬಂದಿ ಯಾರಾದರೂ ಕಳ್ಳತನದಲ್ಲಿ ಒಳಕ್ಕೆ ನುಗ್ಗಿ ನನ್ನನ್ನು ಹಿಂಸಿಸಬಹುದು' ಎಂದು ಹೇಳಿದ. ಬಹಳ ಗಂಭೀರವಾಗಿ, ಹೇಳಿದ.

ಗೇಟನ್ನು ಸರಿಯಾಗಿ ಮುಚ್ಚಿ ರಸ್ತೆಗೆ ಇಳಿದಾಗ 'ಅದು ಯಾಕೋ ಬ್ರಹ್ಮಯ್ಯ ಹಾಗೆ ಅಂದ. ಹಾಸ್ಯಕ್ಕಾಗಿ ಮಾತಾಡಿದಂತಿಲ್ಲ' ಎಂದು ಗೆಳೆಯನನ್ನು ಕೇಳಿದೆ. 'ಈ ಹಾಳು ಪಾಂಡಿತ್ಯವು ಅಧಿಕವಾದಷ್ಟೂ ಸ್ವಲ್ಪ ಕ್ರಾಕ್ ತರಹ ಆಡಲು ಪ್ರಾರಂಭಿಸುತ್ತಾರೆ, ಕಣೋ ! ಬ್ರಹ್ಮಯ್ಯನ ಪಾಂಡಿತ್ಯಕ್ಕೆ ಸರಿಯಾದ ಪುರಸ್ಕಾರ ದೊರೆಯಲಿಲ್ಲ ಎಂದವನ ಕೋಪ. ತಕ್ಕ ಪುರಸ್ಕಾರ ದೊರೆಯದೆ ಇರುವುದಕ್ಕೆ, ಅರಸರ ಕಡೆಯ ಪೋಲೀಸಿನವರು ಕಾರಣ ಎಂದವನ ಭ್ರಮೆ. ಎಂದಾದರೂ ಆ ಪೋಲೀಸಿನವರು ಹೇಗಾದರೂ ಬಂದು ಹಿಡಿದು ಪರಮ ಶಿಕ್ಷೆಗೆ ಗುರಿಮಾಡುತ್ತಾರೆ ಎನ್ನುವ ತೀವ್ರ ಭಯ ಅವನಿಗೆ. ಅಸಾಧ್ಯವಾದ ಈ ಭ್ರಮೆಯೊಂದರಿಂದಲೇ ಅವ ಬಾಗಿಲು ಭದ್ರ ಮಾಡುತ್ತಾನೆ. ಕಿಟಕಿಯನ್ನು ಸಂಶಯದಿಂದ ನೋಡುತ್ತಾನೆ. ಹೊರಗೆ ಅಪರೂಪಕ್ಕೆ ಬಂದಾಗ, ಪೋಲೀಸನ ಸಮವಸ್ತ್ರವನ್ನು ಕಂಡರೆ ಗಲ್ಲಿಗೆ ತಿರುಗಿ ತಲೆ ಮರೆಸಿಕೊಳ್ಳುತ್ತಾನೆ. ದುರಭ್ಯಾಸಗಳಾವುದೂ ಇಲ್ಲ ನೋಡು, ಆದರೆ ಈ ಹುಚ್ಚೆಂದು ಬಲವಾಗಿ ಹಿಡಿದಿದೆ ಅವನಿಗೆ' ಎಂದು ಗೆಳೆಯ ಹೇಳಿದ. 'ಬುದ್ಧಿಯನ್ನು ಕೊಟ್ಟ ದೇವರು ಅದರ ಜತೆಗೆ ಈ ರೀತಿ ಬರೆಯನ್ನೂ ಹಾಕುತ್ತಾನಲ್ಲಾ; ಅಯ್ಯೋ ಪಾಪ' ಎಂದಂದುಕೊಂಡೆ.