೧೧೩
ಹಾವಳಿ, ಇವೆರಡೂ ಕಾಟಗಳನ್ನು ತಡೆಯಲಾರದೆ, ಅವ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದ. ಯಾವ ರೀತಿಯಲ್ಲಿ ಆತ್ಮಹತ್ಯವನ್ನು ಮಾಡಿಕೊಂಡನೋ ತಿಳಿಯಲಿಲ್ಲ. ಯಾವುದಾದರೂ ವಿಷವನ್ನು ನುಂಗಿದನೊ? ಅಥವಾ ಬೇನೆ ಯಾವುದಾದರೂ ಬಂದು, ಚಿಕಿತ್ಸೆಗೆ ಅವ ಹೋಗದೆ, ಅಥವಾ ಹೋಗಲಾರದೆ, ಸತ್ತನೋ, ಭಗವಂತನೇ ಬಲ್ಲ.
“ನೀನು ಹೇಗಿದ್ದರೂ ಆಯಿತು, ನನಗೆ ಅಗತ್ಯ. ನೀನು ನನ್ನ ನೆಂಟ ಎಂದು ಯಾರಾದರೂ ಅವನನ್ನು ಆದರಿಸಿದ್ದರೆ, ಸೂಕ್ತ ಕಾಲದಲ್ಲಿ ತಕ್ಕ ಚಿಕಿತ್ಸೆಯನ್ನು ಆತನಿಗೆ ಒದಗಿಸಿದ್ದಿದ್ದರೆ, ಭ್ರಮಾ ನಕ್ಷತ್ರಿಕನ ಕಾಟವು ಬಲುಪಾಲು ಕಡಿಮೆಯಾಗುತ್ತಿತ್ತು. ಹಾಗೂ ಆತನಲ್ಲಿ ಸುಪ್ತವಾಗಿದ್ದ ಸ್ಕಿಜೋಫ್ರೆನಿಯಾದ ಹಾವಳಿಯನ್ನು ಬಲು ಮಟ್ಟಿಗೆ ತಡೆಯಬಹುದಾಗಿತ್ತು. ಹೊಗಳುವ ಸ್ನೇಹಿತರಿದ್ದರು, ಬ್ರಹ್ಮಯ್ಯನಿಗೆ; ಆದರೆ ಹೃದಯವನ್ನು ಒಲಿಸುವ ಸ್ನೇಹಿತರಾಗಲಿ ನೆಂಟರಾಗಲಿ ಇರಲಿಲ್ಲ. ಎಷ್ಟೋ ಜನರಿಗೆ ಬಾಳಿನಲ್ಲಿ ಈ ಅನುಭವವು ಉಂಟಾಗುತ್ತದೆ. ಅವರಲ್ಲಿ ತುಂಬಾ ಜನರು 'ನೆಂಟ ನೀನೊಬ್ಬನೇ ವೆಂಕಟರಮಣ' ಎಂದು ಅವನಿಗೆ ಗಂಟು ಬೀಳುತ್ತಾರೆ. ಹಾಗಾಗಿ ಬಾಳಿನಲ್ಲಿ ಜಯಗಳಿಸುತ್ತಾರೆ. ಆದರೆ ಬ್ರಹ್ಮಯ್ಯನ ಚುರುಕು ಬುದ್ಧಿಯು, ವೆಂಕಟರಮಣನಿಗೆ ಶರಣಾಗುವುದನ್ನು ತಪ್ಪಿಸಿತ್ತು. ಕಾರಣ, ಸುಲಭವಾಗಿ ದೊರಕುವ ಚಿಕಿತ್ಸೆಯೊಂದನ್ನು ಅವ ಕಳೆದುಕೊಂಡಿದ್ದ.
ಎಂತಹ ಪಾಂಡಿತ್ಯವಿದ್ದವರೇ ಆಗಲಿ, ಎಷ್ಟು ಚುರುಕು ಬುದ್ಧಿಯೇ ಇರಲಿ; ಭ್ರಮೆಯಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ಏಕೆಂದರೆ ಪಾಂಡಿತ್ಯ, ಚುರುಕು ಬುದ್ಧಿ, ಇವೆರಡೂ ಮೆದುಳಿನ ನವ್ಯ ನೂತನ ಭಾಗವಾದ Cortex ಇಂದ ಸಾಧಿಸಲ್ಪಡುತ್ತವೆ. ಆದರೆ ಪುರಾತನ ಹಾಗೂ ಸನಾತನ ಮೆದುಳಿನ ಕಾರ್ಯವಾದ 'ಭಾವನಾ' ಚಟುವಟಿಕೆಗಳು ಬದುಕಿ ಬಾಳಲು ಅತ್ಯಗತ್ಯ. ಇವುಗಳಲ್ಲಿ ದೋಷವಿದ್ದರೆ, ಲೋಪವುಂಟಾದರೆ, ಆಗ ನಕ್ಷತ್ರಿಕನು ಉದ್ಭವಿಸುತ್ತಾನೆ, ಮನಸ್ಸಿನಲ್ಲಿ, ಪ್ರೇಮ, ಆದರ, ಪ್ರೀತಿ, ಒಲವು ಇವುಗಳು ದೊರಕದೆ ಇದ್ದರೆ, ನಕ್ಷತ್ರಿಕನ ಭ್ರಮೆಗಳು ಕಾಲಿಡುತ್ತವೆ, ಕಾಡುತ್ತವೆ. ಪ್ರೇಮ, ಆದರೆ, ಪ್ರೀತಿ, ಇತ್ಯಾದಿಗಳು ಇರದೆ ಇದ್ದರೆ, ಅಂತಹ ಬಾಳು ನಿರರ್ಥಕ ಎಂದು ಅಂತಹ ಮನಸ್ಸು ಇಂತಹ ಭ್ರಮೆಗಳನ್ನು ಮೂಡಿಸಿ, ಬಾಳನ್ನು ಮುಗಿಸಿಬಿಡುತ್ತದೆಯೋ ? ಏನೋ ?
ಮೇಲಿಂದ ಮೇಲೆ ಅಸಂಖ್ಯಾತ ಅರ್ಜಿಗಳನ್ನು ತಳದಿಂದ ತುದಿಯವರೆಗೂ ಇದ್ದ ಅಧಿಕಾರಿಗಳಿಗೆ ಕಳುಹಿಸುವ ಪ್ರವೃತ್ತಿ ಕಂಡುಬಂದಾಗ, ಅಂತಹವರನ್ನು ಪ್ರೀತಿಸುವವರು, ನುರಿತ ವೈದ್ಯರಲ್ಲಿಗೆ ಕರೆದುಕೊಂಡು ಹೋದರೆ, ಯಶಸ್ವೀ