ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೧೬

ಮನಮಂಥನ

ಕೈಕಾಲುಗಳಲ್ಲಿ ತಾಣವು ಕಡಿಮೆಯಾದಾಗ, ಅವನ ವರ್ತನೆಯಲ್ಲಿ ಸ್ವಲ್ಪ ವಿಪರೀತವು ಕಂಡುಬಂದಿತು. ಮನೆಯವರನ್ನಾಗಲೀ ಕೇರಿಯವರನ್ನಾಗಲೀ ಗಾಬರಿ ಪಡಿಸುವಂತಹ ವಿಪರೀತವಲ್ಲ. ಆದರೆ ಮನೆಮಕ್ಕಳು ಕೂಡ ನಗುವಂತಹ ವರ್ತನೆ. ಸಾಮಾನ್ಯವಾಗಿ ದೊಡ್ಡಗಂಟಲಿನ ವ್ಯಕ್ತಿ. ಈಚೀಚೆಗೆ ಅಂದರೆ ೨-೩ ವರ್ಷಗಳಿಂದ ಪಿಸುಮಾತಿನಲ್ಲಿ ಮಾತನಾಡುತ್ತಿದ್ದ.

'ಬೇಲಿಯಾಚೆ ಎಂಟು ಹತ್ತು ಜನ ಪೋಲೀಸಿನವರು ಗಸ್ತು ತಿರುಗುತ್ತಾ ಇದ್ದಾರೆ, ಮಗಾ ! ದೊಡ್ಡ ಬಾಗಿಲನ್ನು ತೆಗೀಲೇಬೇಡ, ನನ್ನ ಕೋಣೆ ಬಾಗಿಲನ್ನೂ ಭದ್ರ ಮಾಡಿದ್ದೀನಿ.' ಎಂದು ದೊಡ್ಡ ಮಗನಿಗೆ ಪಿಸುಮಾತುಗಳಲ್ಲಿ ಎಚ್ಚರಿಕೆಯನ್ನು ಕೊಡಲಾರಂಭಿಸಿದ. ದೊಡ್ಡ ಮಗನಿಗೆ ಮಾತ್ರವಲ್ಲ. ಹೀಗೆ ಎಚ್ಚರಿಕೆಯನ್ನು ಕೊಡುವುದು, ಮೂರು ನಾಲ್ಕು ವರ್ಷದ ಮನೆಯ ಮಕ್ಕಳಿಗೂ ಈ ತೆರನ ಎಚ್ಚರಿಕೆಯನ್ನು ಕೊಡುತ್ತಿದ್ದ. ದಿನಕ್ಕೆ ಏನಿಲ್ಲ ಅಂದರೂ ಐವತ್ತು ಅರವತ್ತು ಬಾರಿ ಹೀಗೆ ಎಚ್ಚರಿಕೆಯನ್ನು ಕೊಡಲಾರಂಭಿಸಿದ್ದ.

ವಯಸ್ಸು ಎಪ್ಪತ್ತಾದರೂ, ಲಕ್ಷಣವಾಗಿ ಎಂದಿನಂತೆ ಮುದ್ದೆ ಮುಗಿಸುತ್ತಿದ್ದ. ಸಾಕಷ್ಟು ನೆಲ-ಹೊಲ ಇದ್ದುದರಿಂದ, ಹಣದ ತಾಪತ್ರಯವೇನೂ ಇರಲಿಲ್ಲ. ಬೆಳೆದ ನಾಲ್ಕು ಗಂಡು ಮಕ್ಕಳು, ಹೊಲ ಗದ್ದೆಗಳ ಜವಾಬ್ದಾರಿಯನ್ನು ಹೊತ್ತು ಕೊಂಡಿದ್ದರು. ಅವಿಭಕ್ತ ಕುಟುಂಬ, ಮನೆಯಲ್ಲಿದ್ದ ಬೈತಲೆಗಳೆಲ್ಲವೂ ಅನ್ನೋನ್ಯವಾಗಿದ್ದ ಹಳೆಯ ಕಾಲದ ಸಂಪ್ರದಾಯದ ಸಂಸಾರ. ವಿಧುರನಾಗಿದ್ದರೂ ಪಟೇಲ್ ಪುಟ್ಟಣ್ಣ, ನೆಮ್ಮದಿಯಿಂದ ಇರಬೇಕಾದ ಹಿತವಾತಾವರಣ, ಮನೆಯಲ್ಲಿ.

ಆದರೆ ಪುಟ್ಟಣ್ಣನಿಗೆ, ಅರವತ್ತು, ಅರವತ್ತೆರಡರ ವಯಸ್ಸಾದಾಗ, ಮರೆವು ಜಾಸ್ತಿಯಾಗತೊಡಗಿತ್ತು. ಎಲಡಿಕೆಯ ಚೀಲವನ್ನು ಎಲ್ಲಿದ್ದೆ ಎಂದು ಹುಡುಕಿ, ಹುಡುಕಿ, ಕಡೆಗೆ ಸೊಂಟದಲ್ಲಿದೆ ಎಂದು ಕಂಡುಹಿಡಿಯುವಂತಾಯಿತು. ಆದರೂ ಜಮೀನಿನತ್ತ ಹೋಗಿಬರುತ್ತಿದ್ದ. ದಿನದ ಕೆಲಸವು ಸುವ್ಯವಸ್ಥೆಯಾಗಿ ನಡೆಯುವಂತೆ ಬಂದೋಬಸ್ತು ಮಾಡುತ್ತಿದ್ದ. ಅರ್ಧ ಶತಮಾನಕ್ಕೂ ಹೆಚ್ಚು ದಿನಗಳಿಂದ ಕೆಲಸವನ್ನು ಮಾಡಿದ ಅಭ್ಯಾಸ ಬಲದಿಂದ, ಜಮೀನಿನ ಉಸ್ತುವಾರಿಯನ್ನು ತಕ್ಕ ಮಟ್ಟಿಗೆ ಲಕ್ಷಣವಾಗಿಯೇ ನಡೆಸುತ್ತಿದ್ದ. ಅದನ್ನೇನೂ ಮರೆತಿರಲಿಲ್ಲ. ಅಗತ್ಯವಾದ ಸಣ್ಣಪುಟ್ಟ ವಿಷಯಗಳನ್ನು, ಆಗತಾನೇ ನಡೆದಿದ್ದರೂ, ಬಲು ಬೇಗ ಮರೆತು ಬಿಡುತ್ತಿದ್ದ. 'ಎರಡು ಎಲೆ ತಂದುಕೊಡೊ ಲಿಂಗ,' ಎಂದು ಮೊಮ್ಮಗನನ್ನು ಕೂಗಿ ಹೇಳುವ ಒಳಕ್ಕೆ ಹೋಗಿ ಎರಡು ವೀಳೆಯದೆಲೆಯನ್ನು ಇಸುಕೊಂಡು, ಲಿಂಗ ತಂದು, “ತೊಗೋ ಅಜ್ಜಯ್ಯ' ಎಂದು ಕೊಟ್ಟರೆ, 'ನಾನೆಲ್ಲಿ ಎಲೆ ತಾ ಅಂದೆನೋ?