೧೨೧
ಶಕ್ತಿ ಸಮೂಹಗಳನ್ನಾಗಲೀ ನಿಖರವಾಗಿ ಅರಿತಿಲ್ಲ. ದೊರೆತ ಹಲ ಕೆಲವು ಸಾಕ್ಷ್ಯಗಳಿಂದ ಅವುಗಳ ಸ್ವರೂಪವು ಹೀಗೆ ಹೀಗೆ ಇರಬಹುದು ಎಂದು ಊಹಿಸುತ್ತಾರೆ. ಹೀಗೂ ಇರಬಹುದೋ ಎಂದು ಅನುಮಾನಿಸುತ್ತಾರೆ. ಪೂರ್ಣವಾಗಿ ನಿರ್ಧಾರವಾಗುವನಕ, ವೈಜ್ಞಾನಿಕನು ತಾನು ಅನುಮಾನಿಸಿದುದರ ಬೆಂಬೊತ್ತುತ್ತಲೇ ಇರುತ್ತಾನೆ. ಆದಕಾರಣ, ಪ್ರತ್ಯಕ್ಷ ಪ್ರಮಾಣದಂತೆ ಅನುಮಾನ ಪ್ರಮಾಣವನ್ನೂ, ಅರಿವಿಗೆ ಆಧಾರ ಎಂದು ಹಿರಿಯ ಮನನಿಗರು ಅಂದಿರುವುದು.
ಅಂದರೆ, ಊಹಿಸುವ, ಅನುಮಾನಿಸುವ ಪ್ರವೃತ್ತಿಯು ಮಾನವ ಸಹಜವಾದುದು ; ಅಗತ್ಯವೂ ಆದುದು ಎಂದಂತಾಯಿತು. ಊಹಿಸುವ ಪ್ರವೃತ್ತಿಯು ವಿಜ್ಞಾನದಲ್ಲಿ ಅಗತ್ಯವಾದಂತೆ, ಮಾನವನ ನಡವಳಿಕೆಯಲ್ಲಿಯೂ ಕಂಡುಬರುತ್ತದೆ. ಉದಾಹರಣೆಗೆ :-
ಯಾವುದಾದರೂ ಒಂದು ಸಭೆಗೆ ಸ್ವಲ್ಪ ತಡವಾಗಿ ಹೋದರೆ, ಎಲ್ಲರೂ ನನ್ನನ್ನೇ ನೋಡುತ್ತಾರೆ' ಎಂಬ ಅನುಮಾನವು ಬಹಳ ಜನರಲ್ಲಿ ಉಂಟಾಗುತ್ತದೆ. ಮೂಲೆಯಲ್ಲಿ ಹೋಗಿ ಮರೆಯಾಗಿ ಕೂರಲೆತ್ನಿಸುತ್ತಾರೆ. ಇನ್ನು ಕೆಲವರಲ್ಲಿ ಇಂತಹ ಅನುಮಾನವು ಅವರಿಗೆ ಸುಖ ಕೊಡುತ್ತದೆ. ನಾನು ದೊಡ್ಡ ಮನುಷ್ಯ, ಗಣ್ಯ, ಆದ್ದರಿಂದ ಎಲ್ಲರೂ ಗೌರವದಿಂದ, ಅಸೂಯೆಯಿಂದ ನೋಡುತ್ತಾರೆ ಎಂದು ಊಹಿಸುತ್ತಾರೆ. ಅಂತಹ ಪ್ರವೃತ್ತಿ ಇದ್ದವರು ಠೀಕಾಗಿ ನಡೆದು ಮುಂದಿನ ಸಾಲುಗಳಲ್ಲಿ ಸ್ಥಾನವನ್ನು ಹಿಡಿಯಹೋಗುತ್ತಾರೆ.
ಹತ್ತೂ ಜನರು ಮಾತನಾಡುತ್ತಿರುವ ಮದುವೆಯ ಮಂಟಪಕ್ಕೆ ಹೋದಾಗ; ಅವರೆಲ್ಲರೂ ಮಾತನಾಡುವುದನ್ನು ನಿಲ್ಲಿಸಿದರೆ, ನನ್ನ ವಿಷಯವನ್ನೇ ಮಾತನಾಡುತ್ತಿದ್ದಿರಬೇಕು ; ಎಂದು ಊಹಿಸುವುದೂ ಸುಮಾರು ಜನರ ಲಕ್ಷಣ.
ವೇಳೆಯಾದುದರಿಂದ ಮುಖಕ್ಷೌರವನ್ನು ಎಂದಿನಂತೆ ಮಾಡಿಕೊಳ್ಳದೇ ಕಾಲೇಜಿಗೆ ಹೋದ ಅಧ್ಯಾಪಕನು 'ವಿದ್ಯಾರ್ಥಿಗಳೆಲ್ಲರೂ ನನ್ನ ಮುಖವನ್ನು ನೋಡಿ ಒಳಗೊಳಗೇ ನಗುತ್ತಾರೆ' ಎಂದಂದುಕೊಳ್ಳುವುದೂ ಸಾಮಾನ್ಯ.
ಇಂತಹ ಊಹೆಗಳೆಲ್ಲವೂ ಕ್ಷಣಿಕವಾದುವು. ಸ್ವಲ್ಪ ಸಮಯದಲ್ಲಿ ಮಾಯವಾಗುತ್ತದೆ. ಹಾಗೂ ಊಹೆಯು ತಲೆದೋರಿದಾಗಲೂ, ಇದು ನನ್ನ ಮನಸ್ಸಿನ ಭ್ರಮೆಯಾಗಿದೆ ಎನ್ನುವ ಅರಿವು ಇದ್ದೇ ಇರುತ್ತದೆ.
ಪ್ಯಾರನಾಯ್ಡ್ ರೋಗಿಗಳಲ್ಲಿ ಇಂತಹ ಊಹೆಗಳು ಕ್ಷಣಿಕವಾಗಿರದೆ ಭದ್ರವಾಗಿ ಬೇರೂರಿ ಬೆಳೆಯುತ್ತವೆ. ದೃಢವಾದ ಇಂತಹ ಅನುಮಾನಗಳು, ತಕ್ಕ ಪ್ರತಿಕ್ರಿಯೆಯನ್ನು ನಡೆಸುವಂತೆ ಮನಸ್ಸನ್ನು ಒತ್ತಾಯಪಡಿಸುತ್ತವೆ. ಪೋಲೀಸಿನವರು