ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩. ಹಿಸ್ಟಿರಿಯಾ ಪ್ರದರ್ಶನಗಳು

ಕನಕದಲ್ಲಿಯ ಗಂಟಲ ಬೇನೆ

  • ಉಕು, ಉಕ್ರೂ, ಕ್ರೋ' ಎಂದು ನಿಮಿಷಕ್ಕೆ ಇಪ್ಪತ್ತು ಬಾರಿ ಕರ್ಕಶ

ಸದ್ದನ್ನು ಹೂಡುತ್ತಾ ಅತಿ ಪ್ರಯಾಸದಿಂದ ಉಸಿರನ್ನು ಎಳೆದು ಬಿಡುತ್ತಿದ್ದ ರೋಗಿಯನ್ನು, ಇಬ್ಬರು ಹಿರಿಯ ಮುತ್ತೈದೆಯರು ಮತ್ತೊಬ್ಬ ಗಂಡಸು, ಹಿಡಿದುಕೊಂಡು ನಡೆಸುತ್ತಾ, ಕರೆತಂದರು. ರೋಗಿಗೆ ಸುಮಾರು ಮೂವತ್ತರ ಪ್ರಾಯ. ತಕ್ಕ ಮಟ್ಟಿಗೆ ಮಜಭೂತಾಗಿ ಬೆಳೆದ ರೋಗಿಯ ಮುಖದಲ್ಲಿ ಕಾತರದ ಕಳೆಯಿತ್ತು.

ಈ ರೀತಿ ಉಸಿರು ಕಟ್ಟಿಕೊಂಡು, ಕರ್ಕಶ ಶಬ್ದ ಮಾಡುತ್ತಾ ಹೊರಬರ ಬೇಕಾದರೆ, ಗಂಟಲಿನಲ್ಲಿ ಯಾವುದಾದರೂ ಅಡಚಣೆಯಿರಬೇಕು. ಒಳಕ್ಕೆ ಉಸಿರು ಸುಲಭವಾಗಿ ಹೋಗಿ, ಹೊರಕ್ಕೆ ಬರುವಾಗ ಅಡಚಣೆಯಾದರೆ ಸಿರ್ ಗುರ್ ಅಂತ ಬೆಕ್ಕುಗಳು ಕಾದಾಡಿದ ಸದ್ದು ಕೇಳಿಸುತ್ತದೆ. ಉಬ್ಬಸ ರೋಗದಲ್ಲಿ ಹೀಗಾಗುವುದು ಸಾಮಾನ್ಯ ಒಳಕ್ಕೆಳೆದುಕೊಳ್ಳಬೇಕಾದರೆ, ತೊಂದರೆಯಾದರೆ ಆಗ ಡಿಫೀರಿಯಾ ಅಥವಾ ಬೇರೆ ಯಾವುದಾದರೂ ವಸ್ತುವು ಗಂಟಲಿನಲ್ಲಿ ಅಥವಾ ಶ್ವಾಸಮಾರ್ಗಗಳಲ್ಲಿ ಸಿಕ್ಕಿಕೊಂಡು ಕಾಟ ಕೊಡುತ್ತಿದೆ, ಎಂದು ನಿರ್ಧರಿಸಬೇಕು. ಇಂತಹ ಅವಸ್ಥೆಯು ತೀವ್ರ ಅಪಾಯಕಾರಿಯಾದುದು. ತುರ್ತಾಗಿ ಪರೀಕ್ಷೆಮಾಡಿ ನೋಡಬೇಕು. ಆದುದರಿಂದ ರೋಗಿಯನ್ನು ತತ್‌ಕ್ಷಣ ಒಳಕ್ಕೆ ಕರೆದುಕೊಂಡು ಹೋಗಿ ಗಂಟಲು ಮತ್ತು ಶ್ವಾಸನಾಳಗಳನ್ನು ಪರೀಕ್ಷೆ ಮಾಡಿದೆ. ಯಾವ ಅಡಚಣೆಯೂ ಇರಲಿಲ್ಲ. ರೋಗಿಯ ಮುಖವನ್ನೂ, ಆಕೆಯ 'ಕ್ರೂ ಉಕ್ರೂ ಕ್ರೋ' ಪ್ರದರ್ಶನವನ್ನು ನೋಡಿದಾಗಲೇ ಇದು ಹಿಸ್ಟೀರಿಯಾ ತರಹದ್ದು ಎಂದು ತಿಳಿದಿತ್ತು. ಆದರೂ ವಿವರವಾಗಿ ಪರೀಕ್ಷೆಯನ್ನು ಮಾಡಿದರೆ, ರೋಗಿಯ ಮನಸ್ಸಿಗೆ ತೃಪ್ತಿಯಾಗುತ್ತದೆ. ಹಾಗೂ ಆಕೆಯ ಜತೆ ಬಂದಿದ್ದವರಿಗೆ ಸಮಾಧಾನವಾಗುತ್ತದೆ. ಆದುದರಿಂದಲೇ ಪರೀಕ್ಷೆಯನ್ನು ನಡೆಸಿದ್ದುದು. ಹೀಗೆ ಪರೀಕ್ಷೆಯನ್ನು ಮಾಡುವುದು, ಚಿಕಿತ್ಸೆಯ ಒಂದು ಹಿರಿಯ ಅಂಶವು ಕೂಡ. ಆಕೆಯ ಜತೆಯಲ್ಲಿ ಬಂದಿದ್ದ ಮುತ್ತೈದೆಯರು ತುಂಬ ಕಾತರರಾಗಿದ್ದರು.