ಮನಮಂಥನ
ಹೇಳಿ, ಒಳ ಕೊಠಡಿಗೆ ಕರೆದುಕೊಂಡು ಹೋದೆ.
ಕೆಲವು ವರ್ಷಗಳಿಂದಲೂ ಆಕೆಯ ಗಂಡ ನನ್ನಲ್ಲಿಗೆ ಸಣ್ಣಪುಟ್ಟ ಬೇನೆಗಳ ಚಿಕಿತ್ಸೆಗೆಂದು ಬರುತ್ತಿದ್ದ. ನಗುಸರಿಸಿ ಯುವಕ, ಬಲು ಆತ್ಮೀಯನಾಗಿದ್ದ. ಮದುವೆಯಾದ ನಂತರ, ಹೆಂಡತಿಯನ್ನು ಕರೆದುಕೊಂಡು ಬಂದು ನನಗೆ ಪರಿಚಯ ಮಾಡಿಸಿ ಆಶೀರ್ವಾದ ಬೇಡಿದ್ದ. ನನ್ನ ವೈದ್ಯಕೀಯ ಸೇವೆಯು ನಿಮಗೆ ಅಗತ್ಯವಾಗದೆ ಇರುವಂತೆ, ದೇವರು ನಿಮ್ಮನ್ನು ಕಾಪಾಡಲಿ ಎಂದು ತುಂಬಿದೆದೆಯಿಂದ ಹರಸಿದ್ದೆ. ಆಕೆಯೂ ತುಂಬ ಒಲವಿನಿಂದ ನಮಸ್ಕಾರ ಮಾಡಿದ್ದಳು. ಆದಕಾರಣ ಸಲಿಗೆಯಿಂದ ಮಾತನಾಡುತ್ತಿದ್ದೆ.
ಒಳಕೊಠಡಿಗೆ ಬಂದು ಕುಳಿತಳು, ಮಗುವಿನೊಂದಿಗೆ. ಅಳುವ ತಾಯಿಯನ್ನು ಕಂಡು ಮಗುವೂ ಅಳತೊಡಗಿತು. ಅದನ್ನು ಎತ್ತಿಕೊಂಡು ಒಂದೆರಡು ನಿಮಿಷ ಆಡಿಸುವ ಹೊತ್ತಿಗೆ, ಮಗುವೂ ಆಡತೊಡಗಿತು. ವಿಜಯಲಕ್ಷ್ಮಿಯ ಅಳುವೂ ನಿಂತಿತ್ತು. ಅವಳೇ ಅನಂತರ ಹೇಳಿದಳು:-
'ಮಗುವಿಗೆ ಗುಣವಾಗಿದೆ ಎನ್ನುವುದು ನನಗೂ ಗೊತ್ತು. ಅದಕ್ಕಲ್ಲಾ ಅಳುವು ಬಂದದ್ದು. ನಾನು ಪಡುತ್ತಿರುವ ನರಕ ಸಂಕಟವನ್ನು ಯಾರೊಂದಿಗೂ ಹೇಳಿಕೊಂಡಿರಲಿಲ್ಲ. ನೀವು ತುಂಬಾ ವಿಶ್ವಾಸದಿಂದ, ನಿನಗ್ಯಾತರ ಕಾತರವಮ್ಮಾ ಎಂದು ಕೇಳಿದಿರಿ. ಹಾಗೆ ಯಾರೂ ನನ್ನನ್ನು ನಿನಗೇನು ಕಷ್ಟ ಎಂದು ಕೇಳುತ್ತಿಲ್ಲ. ಆದ್ದರಿಂದ ನೀವು ಕೇಳಿದಾಗ ಅಳುವು ಬಂತು. ಅದನ್ನು ತಡೆಯಲಾಗಲಿಲ್ಲ. ಎಲ್ಲರೆದುರಿಗೂ ಅತ್ತೆ, ಯಾರೇನಂದುಕೊಂಡರೋ ಏನೋ?' ಎಂದು ಪೀಠಿಕೆಯನ್ನು ಹಾಕಿದಳು.
“ಅದು ಸರಿಯಮ್ಮ ! ಆದರೆ ಅಂತಹ ಆತಂಕವಿನ್ನಾವುದಿದೆ? ಸಂಸಾರದ ಗುಟ್ಟಾದರೂ ನನ್ನಲ್ಲಿ ಹೇಳಬಹುದಲ್ಲ.' ಎಂದು ಹೇಳಿದೆ.
'ನನ್ನ ಸಂಕಟ ಭಗವಂತನಿಗೇ ಗೊತ್ತು ಡಾಕ್ಟರೆ ! ಬೆಳಿಗ್ಗೆ ಏಳು ಗಂಟೆಗೆ, ಗಂಡ ಫ್ಯಾಕ್ಟರಿಗೆ ಹೋಗುತ್ತಾರೆ. ಅವರನ್ನು ಕಳುಹಿಸಿಕೊಟ್ಟು ಗೇಟನ್ನು ಹಾಕಿ, ಮನೆಯ ಬೀದಿಬಾಗಿಲನ್ನೂ ಮುಚ್ಚಿ ಅಗಳಿ ಎಳೆದು, ಅಡಿಗೆ ಮನೆಗೆ ಬರುತ್ತೇನೆ. ಬಾಗಿಲುಗಳನ್ನು ಸರಿಯಾಗಿ ಹಾಕಿದ್ದೇನೆಯೇ ಎಂಬ ಅನುಮಾನವು ಬರುತ್ತದೆ. ಹೋಗಿ ನೋಡಿಕೊಂಡು ಬರುತ್ತೇನೆ. ಅಡಿಗೆಯ ಮನೆಗೆ ಬಂದಕೂಡಲೇ ತಿರುಗಿ ಅನುಮಾನವು ಬರುತ್ತದೆ. ತಿರುಗಿ ಹೋಗಿ ನೋಡಿಕೊಂಡು ಬರಬೇಕು. ಈಗ ತಾನೇ ನೋಡಿಕೊಂಡು ಬಂದೆನಲ್ಲಾ ಎಂದು ಮನಸ್ಸು ಒಂದು ಕಡೆ ಹೇಳುತ್ತೆ. ತಿರುಗಿ ಹೋಗಿ ನೋಡುವುದು ಶುದ್ಧ ಪೆಚ್ಚುತನ ಎಂದು ತಿಳಿದಿರುತ್ತದೆ.