ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಒಬ್ಸೆಷನಲ್ 'ಬೇನೆಗಳು'

೧೬೩

ಅತ್ಯಗತ್ಯವಾಗಿ ಮನೆಯಿಂದ ಎಲ್ಲಿಗಾದರೂ ಹೋಗಲೇಬೇಕಾದರೆ, ರಸ್ತೆಯಲ್ಲಿ ನಡೆಯುವಾಗ ಎಲ್ಲಿ ಮುಸುರೆಯು ತಾಕಿಬಿಡುತ್ತದೋ ಎಂದು, ಸೀರೆಯ ಅಂಚು ಮೊಣಕಾಲ ತನಕ ಇರುವಂತೆ ಎತ್ತಿ ಹಿಡಿದುಕೊಂಡು, ರಸ್ತೆಯನ್ನು ದಿಟ್ಟಿಸಿ ನೋಡುತ್ತಾ ನಡೆಯುತ್ತಿದ್ದಳು. ಎಂಜಲಿರಬಹುದು ಎಂದು ಅನುಮಾನ ಬಂದರೆ ಅದರ ಮೇಲೆ ಹಾರಿಕೊಂಡೇ ಹೆಜ್ಜೆ ಹಾಕತೊಡಗಿದಳು. 'ಮಡಿಮಡಿ ಮಡಿಯೆಂದ್‌ ಅಡಿಗಡಿಗೆ ಹಾರುವಿ' ಎಂದ ದಾಸರು ಇಂತಹ ರೋಗಿಗಳನ್ನು ನೋಡಿದ್ದಿರಬೇಕು. ಈ ಅವಲಕ್ಷಣವನ್ನು ನೋಡಲಾರದೆ, ಮನೆಯಾಚೆ ಅನಸೂಯಳನ್ನು ಕರೆದುಕೊಂಡು ಹೋಗಲು ಮನೆಯವರು ಹಿಂಜರಿಯತೊಡಗಿದರು. ಅನಸೂಯಳಿಗೆ ಇದರಿಂದ ಮನೆಯಲ್ಲೇ ಮಡಿ ಮಾಡುತ್ತಾ ಮುಸುರೆಯಾಗದಂತೆ ನೋಡಿಕೊಳ್ಳುತ್ತಾ ದಿನವೆಲ್ಲಾ ಕಳೆಯುವಂತಾಯಿತು.

'ಬಂದವರೆದುರಿಗೆ ಮಣಿಮಣಿಯಾಗಿ ಮಾತನಾಡುತ್ತಾಳೆ.ಆಮೇಲೆ ನಮ್ಮನ್ನೆಲ್ಲಾ ಗೋಳು ಹುಯ್ದುಕೊಳ್ಳುತ್ತಾಳೆ' ಎಂದು ಸ್ವಭಾವಿಕವಾಗಿ ಅತ್ತೆಯು ರೇಗಿದಳು. 'ಎಲ್ಲಾ ಶುದ್ಧ ನಟನೆ. ಒದ್ದು ಬುದ್ಧಿ ಹೇಳಿದರೆ ನೆಟ್ಟಗಾಗುತ್ತಾಳೆ' ಎಂದು ಮಗನಿಗೆ ಹೇಳಿದಳು. ಪಾಪ ! ಇದೊಂದು ಬರಬಾರದ ಬೇನೆ ಎಂದು ತಿಳಿವಿಲ್ಲದ ಅತ್ತೆಗೆ ಹೇಗೆ ಗೊತ್ತಾಗಬೇಕು ! ಇಂತಹ ಅಜ್ಞಾನವಿರುವಾಗ, ಸೊಸೆಯ ಮೇಲೆ ಅನುಕಂಪವಾದರೂ ಹೇಗೆ ಬರಲು ಸಾಧ್ಯ ? ಶಿಕ್ಷಿಸುವ ಮನಸ್ಸುಂಟಾಗಿ, ಅಂದೂ ಬೈದೂ ತಿದ್ದಲು ಆಕೆ ಆರಂಭಿಸಿದಳು. ಅನಸೂಯಳ ಮನಸ್ಸು ಮತ್ತೂ ಮೊಂಡು ಹಾಕಿಕೊಂಡಿತು. ಅವಳ ಒಳಗುದಿಯೂ ಉದ್ರೇಕಗೊಳ್ಳುತ್ತಿತ್ತು.

ಅನಸೂಯಳು ಬಾಲ್ಯದಲ್ಲಿ ಚೊಚ್ಚಲಾಗಿದ್ದರೂ, ತುಂಬಿದ ಮನೆಯಲ್ಲಿ ಬೆಳೆದಿದ್ದವಳು. ಒಂಟಿಯಾಗಿ ಆಡಿಕೊಂಡು ಇರುವ ಸ್ವಭಾವವಿದ್ದಿರಲಿಲ್ಲ. ತಕ್ಕ ಮಟ್ಟಿಗೆ ಜಾಣ ಹುಡುಗಿ, ಪರೀಕ್ಷೆಗಳಲ್ಲೆಲ್ಲಾ ಉತ್ತೀರ್ಣಳಾಗುತ್ತಿದ್ದಳು. ಪದವೀ ಧರೆಯೂ ಆಗಿದ್ದಳು. ಸಂಕಟಪಡುವವರನ್ನು ಕಂಡರೆ ಅತಿಯಾಗಿ ಮರುಗುವ ಸ್ವಭಾವ. 'ಅಯ್ಯೋ ಅಂತ ಅಂದರೆ ಸಾಲದೆ? ಅಳುತ್ತಾ ಕೂರುತ್ತಾಳಲ್ಲೇ' ಎಂದು ಅವಳ ಅಜ್ಜಿಯು ಹೇಳುತ್ತಿದ್ದಳು. ಇತರರ ಕಷ್ಟಸಂಕಟವನ್ನು ನೋಡಿದರೆ ಅನಸೂಯಳು ಅಳುವುದೇ ಅಜ್ಜಿಯು ಹಾಗನ್ನುವುದಕ್ಕೆ ಕಾರಣ. ಅನಸೂಯಳ ಮನಸ್ಸು ಅತಿ ಮೃದು. ಆದಕಾರಣದಿಂದಲೇ ಹಟವೂ ಸ್ವಲ್ಪ ಹೆಚ್ಚು. ಪ್ರದರ್ಶಿಸುವ ಹಟವಲ್ಲ. ಒಳಗೊಳಗೇ ಕುದಿಯುವ ಹಟದ ಸ್ವಭಾವ.