ಮನಮಂಥನ
ಬಟ್ಟಲನ್ನು ಗುರಿ ಹಿಡಿದು, ಇದ್ದ ಹಾಲನ್ನೆಲ್ಲಾ ಸರಂತ ಎಸೆದಳು. ಅತ್ತಿಗೆಯ ಎದೆಯೆಲ್ಲಾ ಹಾಲುಮಯವಾಯಿತು. ಕುಮುದ ಗಹಗಹಿಸಿ ನಗಲಾರಂಭಿಸಿದಳು.
- ಈಗ ಅತ್ತಿಗೆ ಹಾಲು ಸುರಿಸುತ್ತಾ ಇದಾಳೆ' ಎಂದು ನಗಲಾರಂಭಿಸಿದಳು.
ಮಾರನೆಯ ದಿನ ಜುಲುಮು ಮಾಡಿ ಆಸ್ಪತ್ರೆಗೆ ಸೇರಿಸಿದರು. ಮೂರುನಾಲ್ಕು ವಾರಗಳಲ್ಲಿ ಗುಣವಾಗಿ, ಮನೆಗೆ ಹಿಂತಿರುಗಿದಳು, ಅನ್ನಿ,
ತಂದೆಯ ಮನೆಯಲ್ಲಿ ಯಾವ ಕೆಲಸವೂ ಇಲ್ಲದೆ ಬೆಳೆದ ಹೆಣ್ಣು ಕೂರುವಾಗ ಡಿಪ್ರೆಷನ್ ಆರಂಭವಾಗಿತ್ತು. ಜತೆ ವಾರಿಗೆಯವರೆಲ್ಲ ಗಂಡನ ಮನೆಗೆ ಹೋಗಿ ಮಕ್ಕಳ ತಾಯಾದುದನ್ನು ಕಂಡಿದ್ದಳು. ತನಗೆ ಆ ಭಾಗ್ಯವಿಲ್ಲವಲ್ಲ, ಎಂದು ಖಿನ್ನಳಾಗಿದ್ದಳು. ಅಂಕೆ ಶಿಕ್ಷೆಯನ್ನು ಅಮ್ಮ ಇಡ ಹೋದಾಗ, ತಳಮಳಗೊಂಡಿದ್ದ ಮನಸ್ಸು ಮುದುಡಿಕೊಂಡಿತು. ಎಂದೂ ಬರಿ ಮಾತನ್ನು ಆಡದಿದ್ದ ಅಪ್ಪ ರೇಗಿ ಕೆನ್ನೆಗೆ ಹೊಡೆದಾಗ, ಅವಳ ಮನಸ್ಸು ಇನ್ನೂ ಬಿಗಿಯಾಗಿ ಮುದುಡಿತು. ಮಂತ್ರ ವಾದಿಯ ಆಟಾಟೋಪದ ಪೂಜೆಯು ಒಂದು ತೆರನ “shock' ಕೊಟ್ಟಿತು. ಆ ಭಯದಿಂದ ಇದ್ದ ಭಯವು ತುಸುಕಾಲ ಕಡಿಮೆಯಾಯಿತು.
ಮದುವೆಯಾಗಿ ಗಂಡನ ಮನೆಗೆ ಹೋದಮೇಲೆ, ಡಿಪ್ರೆಷನ್ ಇದ್ದೇ ಇತ್ತು. ಹೆರಿಗೆಯಾದ ಕಾಲದಲ್ಲಿ ಸುಸ್ತಾಗಿದ್ದುದರಿಂದ, ಬಾಣಂತಿ ಸನ್ನಿ ಎನಿಸಿಕೊಳ್ಳಬಹುದಾದ ಪ್ಯೂರ್ಪರಲ್ ಮೇನಿಯಾ, ಆರಂಭವಾಯಿತು.
ಆಸ್ಪತ್ರೆಯಲ್ಲಿ, ಮೇನಿಯಾವನ್ನು ಐದಾರು ದಿನಗಳಲ್ಲಿ ವಾಸಿಪಡಿಸಿದರು. ನಂತರ ಹಿನ್ನೆಲೆಯಲ್ಲಿ ಕೆಲವು ವರ್ಷಗಳಿಂದ ಕಾಡುತ್ತಿದ್ದ ಡಿಪ್ರೆಷನ್ ಅವಸ್ಥೆಯನ್ನೂ ಪತ್ತೆ ಹಚ್ಚಿದರು. ಮೂರು ನಾಲ್ಕು ವಾರ, ಆ ಬೇನೆಗೆ ಸೂಕ್ತ ಚಿಕಿತ್ಸೆಯನ್ನು ಮಾಡಿದರು. ಮನೆಗೆ ಹಿಂದಿರುಗಿದಳು. ಈಗ ಅವಳ ನಡವಳಿಕೆಯಲ್ಲಿ ತುಂಬಾ ಬದಲಾವಣೆಯಾಗಿತ್ತು. ನಗುನಗುತ ಎಲ್ಲರಂತೆ ತಾನೇ ಮಾತಿಗೆ ಆರಂಭಿಸುವಳು. ಮಗುವಿನ ಹೊಣೆಯಲ್ಲಾ ಅವಳದೇನೆ ಈಗ. 'ಮಾನಸಿಕ ಆಸ್ಪತ್ರೆಗೆ ಹೋಗಿಬಂದರೆ ಇಷ್ಟು ಚೆನ್ನಾಗಿ ಗುಣವಾಗುತ್ತೇನೋ, ಮಗು, ನಿನ್ನ ಅಕ್ಕ ಕೂಡ ಕೆಲವು ದಿನಗಳಿಂದ ಸಿಡುಕುತ್ತಿದ್ದಾಳೆ, ಅವಳನ್ನೂ ಆಸ್ಪತ್ರೆಗೆ ಸೇರಿಸೋಣವೇ' ಎಂದು ಮಗನನ್ನು ತಾಯಿ ಕೇಳಿಯೇಬಿಟ್ಟಳು. 'ಕುಮುದನಿಗನಕ ಬಾಣಂತಿ ಸನ್ನಿ ಬಡಿದಿತ್ತು, ಅವಳು ಹೋಗಿ ಬಂದುದು ಸರಿ, ನನಗೇನು ಬಸಿರೇ ಬಾಣಂತನವೇ ? ನಾನ್ಯಾಕೆ ಆಸ್ಪತ್ರೆಗೆ ಹೋಗಬೇಕು' ಎಂದು ಮನೆಯ ಮಗಳು, ಅಮ್ಮ ಮತ್ತು ತಮ್ಮನ ಮೇಲೆ ಹೌಹಾರಿದಳು. ತನ್ನ ಅರಿವು ಇಲ್ಲದೆಯೇ ಆಕೆ, ಸಿಡುಕಿನ ಕಾರಣವನ್ನು ಹೊರಗೆಡವಿದ್ದಳು.