೬. ಜೋಫ್ರೆನಿಯಾಗಳು
ಸೀತುವಿನ ಸ್ಕಿಜೋ
ಸೀತಾರಾಮ ಜಾಣ ಹುಡುಗ, ಬಾಲ್ಯದಿಂದಲೂ ಹಿರಿಯರು ಹೇಳಿದ ಹಾಗೆ ನಡೆದುಕೊಳ್ಳುತ್ತಿದ್ದ. ತುಂಬಾ ತಂಟೆ ತಕರಾರು ಮಾಡಿ, ತಾಯ್ತಂದೆಯರನ್ನು, ತುಂಟ ಮಕ್ಕಳಂತೆ ಗೋಳು ಹುಯ್ದುಕೊಳ್ಳುತ್ತಿರಲಿಲ್ಲ. ಅಂದರೆ ಪೆದ್ದು ಅಂತಲ್ಲ. ಪ್ರತಿ ಪರೀಕ್ಷೆಯಲ್ಲೂ ನೂರಕ್ಕೆ ಎಪ್ಪತ್ತು ಎಂಭತ್ತು ಮಾರ್ಕುಗಳನ್ನು ಸುಲಭವಾಗಿ ಪಡೆಯುತ್ತಿದ್ದ. ಸ್ವಲ್ಪ ಸಂಕೋಚಪ್ರವೃತ್ತಿಯಾದುದರಿಂದ, ತಾನೇ ಮೇಲು ಬಿದ್ದುಕೊಂಡು ಯಾವುದಕ್ಕೂ ತಲೆಹಾಕುತ್ತಿರಲಿಲ್ಲ. ಅಷ್ಟಾಗಿ ಹೆಚ್ಚು ಸ್ನೇಹಿತರೂ ಅವನಿಗಿರಲಿಲ್ಲ. ಜತೆ ಹುಡುಗರೊಂದಿಗೆ ಆಟಗಳನ್ನು ಆಡುತ್ತಿದ್ದ. ಆದರೆ ಅವರೊಡನೆ ಗಾಢ ಸ್ನೇಹವನ್ನಾಗಲೀ ತುಂಬಾ ಸಲಿಗೆಯನ್ನಾಗಲೀ ಬೆಳೆಸಿಕೊಳ್ಳಲಿಲ್ಲ.
ಹೈಸ್ಕೂಲಿನಲ್ಲಿ ಓದುವುದಕ್ಕೆ ಸೇರಿದಾಗ ಅವನಿಗಿನ್ನೂ ಹನ್ನೆರಡೇ ವಯಸ್ಸು. ಲೈಬ್ರೆರಿಯಿಂದ ಪುಸ್ತಕಗಳನ್ನು ತಂದು ಓದುತ್ತಿದ್ದ ಹುಡುಗರಲ್ಲಿ ಸೀತುವು ಅಗ್ರಗಣ್ಯ. 'ಓದುವುದರಲ್ಲಿ ತುಂಬಾ ಆಸಕ್ತಿ ಇರುವ ಹುಡುಗ ಅಂದರೆ ನೀನಪ್ಪಾ ; ಚೆನ್ನಾಗಿ ಓದಿಕೊಂಡು ಯಶಸ್ವಿಯಾಗು' ಎಂದು ಲೈಬ್ರೇರಿಯನ್ ಅವನನ್ನು ಹೊಗಳಿದ್ದರು. ಆದರೆ ಒಂದು ವಿಚಿತ್ರ ಸ್ವಭಾವವು ಎದ್ದು ಕಾಣುತ್ತಿತ್ತು. ಕ್ಲಾಸಿನ ಹುಡುಗರೆಲ್ಲ ಬಿಳಿಯದು ಅಥವಾ ಕಪ್ಪು ಬಣ್ಣದ ಟೋಪಿಯನ್ನು ಹಾಕಿಕೊಳ್ಳುತ್ತಿದ್ದರು. ಇವ ಹಳದಿ ಟೋಪಿಯನ್ನು ಹೊಲಿಸಿ ಹಾಕಿಕೊಂಡಿದ್ದ. ಜತೆ ಹುಡುಗರು ಎಷ್ಟು ಗೇಲಿ ಎಬ್ಬಿಸಿದರೂ ಸೀತು ತೆಪ್ಪಗಿರುತ್ತಿದ್ದ. ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಓದುವ ವರ್ಷದ ಮೊದಲಲ್ಲಿ ಕೈಗಡಿಯಾರವನ್ನು ತಂದೆ ತಂದುಕೊಟ್ಟರು. 'ಇದು ಬೇಡ, ಅಪ್ಪಾ ! ಜೇಬು ಗಡಿಯಾರವನ್ನು ತಂದರೆ ತುಂಬಾ ಚೆನ್ನ' ಎಂದು ಹೇಳಿ, ಹಠ ಹಿಡಿದು ಜೇಬು ಗಡಿಯಾರವನ್ನು ತರಿಸಿಕೊಂಡ. ಹೈಸ್ಕೂಲಿನಲ್ಲೆಲ್ಲಾ ಜೇಬು ಗಡಿಯಾರವಿದ್ದವರು ಇಬ್ಬರು ; ಸಂಸ್ಕೃತದ ಮಾಸ್ತರೊಬ್ಬರು ; ನಮ್ಮ ಸೀತು ಇನ್ನೊಬ್ಬ. ಜತೆ ಹುಡುಗರ ಗೇಲಿಗೆ ಇದೂ ಒಂದು ವಸ್ತುವಾಗಿತ್ತು.
ಶಾಲೆಯಲ್ಲಿದ್ದ ಹುಡುಗರೆಲ್ಲರೂ ತಲೆಯ ಕ್ರಾಪ್ ಮಾಡಿಸಿಕೊಂಡಿದ್ದರು. ಇವ ಮಾತ್ರ ಪಿಳ್ಳುಜುಟ್ಟಿನ ಗಂಟನ್ನು ಕಟ್ಟಿಕೊಳ್ಳುತ್ತಿದ್ದ. ವೈದಿಕರ ಮನೆಯವನು