ಮೇಜಿನ ಮೇಲೆ ಪುಸ್ತಕವನ್ನಿಟ್ಟುಕೊಂಡು ಓದುವುದಕ್ಕೆಂದು ಸೀತು ಕುಳಿತುಕೊಳ್ಳುತ್ತಿದ್ದ. ಆದರೆ ಅರ್ಧ ಗಂಟೆಯಾದರೂ ಹಾಳೆಯನ್ನು ಮಗುಚುತ್ತಿರಲಿಲ್ಲ. "ಯಾಕೋ? ಓದಿದ್ದು ಅರ್ಥವಾಗಲಿಲ್ಲವೇನೋ? ಬೇಕಾದರೆ ಹೇಳಿಕೊಡ್ತೀನಿ' ಎಂದು ರೂಂಮೇಟ್ ಹೇಳಿದರೆ ; ಅವನನ್ನು ದುರುಗುಟ್ಟಿಕೊಂಡು ಸೀತು ನೋಡಿದ. ಉತ್ತರವೀಯಲಿಲ್ಲ.
'ದುರುಗುಟ್ಟಿಕೊಂಡು ಹುಚ್ಚನ ತರಹ ನೋಡ್ತಾನೆ; ಈ ಪೀಡೆಯ ಸಹವಾಸ ನನಗೇಕೆ' ಎಂದು ರೂಂಮೇಟ್ ಮಾತನಾಡಿಸುವುದನ್ನು ಬಿಟ್ಟುಬಿಟ್ಟ, ಹಾಸ್ಟೆಲಿನ ಇತರ ಹುಡುಗರ ಹತ್ತಿರ ಇದನ್ನೆಲ್ಲಾ ಅವ ಹೇಳಿದ. ರೂಂ ಬದಲಾಯಿಸಿಕೊಂಡು ಬಿಡೋ, ಅವಕಾಶ ದೊರೆತಾಗ ಎಂದು ಸ್ನೇಹಿತರು ಹೇಳಿದರೇ ಹೊರತು, ಸೀತುವನ್ನು ವಿಚಾರಿಸಲು ಯಾರೂ ಮುಂದಾಗಲಿಲ್ಲ.
ಪರೀಕ್ಷೆಯು ಆರಂಭವಾಯಿತು. ಪರೀಕ್ಷೆ ಎಂದರೆ ವಿದ್ಯಾರ್ಥಿಗಳಿಗೆಲ್ಲ ಆತಂಕವು ಇದ್ದೇ ಇರುತ್ತದೆ. ಆದರೆ ಸೀತುವಿಗೆ ಆತಂಕವಿದ್ದಂತೆ ಕಾಣಲೇ ಇಲ್ಲ. ಎಲ್ಲರಂತೆಯೇ ಪರೀಕ್ಷೆಗೆ ಹೋಗಿ ಕೂರುತ್ತಿದ್ದ. ಮೂರು ತಾಸುಗಳ ಕಾಲ ಕೂತಿರುತ್ತಿದ್ದ. ನಂತರ ಎಲ್ಲರಂತೆಯೇ ಎದ್ದು ಬರುತ್ತಿದ್ದ. ಆದರೆ ಉತ್ತರವನ್ನು ಒಂದು ಹಾಳೆಯಷ್ಟಾದರೂ ಬರೆದಿರುತ್ತಿರಲಿಲ್ಲ. ಪರೀಕ್ಷೆಯಲ್ಲಿ ಉಸ್ತುವಾರಿ ನೋಡಿಕೊಳ್ಳತ್ತಿದ್ದ ಮಾಸ್ತರು, 'ಯಾಕಪ್ಪಾ ! ಸೀತಾರಾಮ ! ಓದುತ್ತಿಲ್ಲವೇ ಖಾಲಿ ಉತ್ತರದ ಪುಸ್ತಕವನ್ನು ಕೊಡುತ್ತಿದ್ದೀಯಲ್ಲಾ' ಎಂದು ಕೇಳಿದಾಗ, ಅವರ ಮುಖವನ್ನು ನೋಡುತ್ತಾ ಯಾವ ರಾಗಭಾವಗಳನ್ನೂ ಕಾಣಿಸದೆ, ಪ್ರತ್ಯುತ್ತರವನ್ನೂ ಕೊಡದೆ ಹೊರಟು ಹೋಗಿದ್ದ. ಇವನಿಗೇನೋ ಆಗಿದೆ ; ತಲೆ ಕೆಟ್ಟಿರಬಹುದು; ಅಥವಾ ದುರ್ವ್ಯಸನಗಳು ಅಧಿಕವಾಗಿರಬಹುದು' ಎಂದು ವಾಸ್ತರು ಅಂದುಕೊಂಡರೇ ವಿನಹಾ ಮತ್ತೆ ಯಾವ ಗಮನವನ್ನೂ ಕೊಡಲಿಲ್ಲ.
ಬೇಸಿಗೆ ರಜಕ್ಕೆ ಮನೆಗೆ ಹಿಂದಿರುಗಿದಾಗ, ಸೀತುವಿನಲ್ಲಿ ಆಗಿದ್ದ
ಬದಲಾವಣೆಯನ್ನು ತಾಯ್ತಂದೆಯರು ಗಮನಿಸಿದರು. ತಮ್ಮತಮ್ಮಲ್ಲೇ
ಮಾತನಾಡಿಕೊಂಡರು. 'ತುಂಬಾ ಓದಿ ದಣಿದಿದ್ದಾನೆ. ಹಾಸ್ಟೆಲಿನಲ್ಲಿ ಸರಿಯಾದ
ಊಟ ಸಿಗುತ್ತಿತ್ತೋ ಇಲ್ಲವೋ? ಆರೈಕೆಯನ್ನು ಮಾಡಿದರೆ ಸರಿಹೋಗಬಹುದು'
ಎಂದಂದುಕೊಂಡರು. ಊಟಕ್ಕೆ ಏಳಪ್ಪಾ ಅಂತ ಅಮ್ಮ ಕರೆದರೆ, ಪುಸ್ತಕ ಓದಬೇಕು;
ಆಮೇಲೆ ಊಟಕ್ಕೆ ಬರ್ತೀನಿ ಎನ್ನುತ್ತಿದ್ದ. ಪುಸ್ತಕವನ್ನು ಹಿಡಿಯುತ್ತಿರಲಿಲ್ಲ. ಊಟಕ್ಕೂ
ಬರುತ್ತಿರಲಿಲ್ಲ. ಯಾಕಪ್ಪಾ ಹೀಗ್ಯಾಡ್ತೀ ಎಂದು ಒಂದೆರಡು ಸರ್ತಿ ಅಮ್ಮ ಒತ್ತಿ
ಕೇಳಿದಾಗ ಸಿಡುಕುತ್ತಾ ಮನೆಯಿಂದಾಚೆಗೆ ಹೋಗುತ್ತಿದ್ದ. 'ಕೆಟ್ಟ ಕೆಟ್ಟ ಸಿನಿಮಾಗಳನ್ನು