ಸ್ಕೀಜೋಫ್ರೆನಿಯಾಗಳು
ಸೀತುವನ್ನು ಹೇಗೋ ಮಾಡಿ ಮನೆಗೆ ಕರೆದು ತಂದರು. ವೈದ್ಯರಿಗೆ ಹೇಳಿ ಕಳಿಸಿದರು.
ಉಲ್ಬಣಿಸಿದ್ದ ಸೀತುವಿನ ಉದ್ರೇಕ ಸ್ಥಿತಿಯನ್ನು ಇಳಿಸಲು, ತಾತ್ಕಾಲಿಕವಾದ ಉಪಶಮನದ ಚಿಕಿತ್ಸೆಯನ್ನು ವೈದ್ಯರು ನಡೆಸಿದರು. ನಂತರ ಮಾರನೆಯ ದಿನ ರೋಗಿಯನ್ನು ಪರೀಕ್ಷಿಸಿ 'ಅವನಿಗೆ ಮನಸ್ಸು ಪಲ್ಲಟವಾಗಿದೆ. ಮಾನಸಿಕ ಆಸ್ಪತ್ರೆಯಲ್ಲಿ ಸಲಹೆಯನ್ನೂ ಚಿಕಿತ್ಸೆಯನ್ನೂ ಪಡೆಯುವುದು ಅಗತ್ಯ ಇಲ್ಲದೆ ಇದ್ದರೆ ಏನಾದರೂ ಆಘಾತವಾಗಬಹುದು. ತತ್‌ಕ್ಷಣ ಕರೆದುಕೊಂಡು ಹೋಗಿ' ಎಂದು ಡಾಕ್ಟರು ಒತ್ತಾಯಪೂರ್ವಕವಾಗಿ ಹೇಳಿದರು.
'ಮನೆಯ ಹಿಂದಿನ ಹುಣಿಸೆಯ ಮರದಲ್ಲಿ ಬ್ರಹ್ಮರಾಕ್ಷಸ ಸೇರಿಕೊಂಡಿದೆ.
ಅದು ನಮ್ಮ ಸೀತುವನ್ನು ಹಿಡಿದಿದೆ. ಮಂತ್ರವಾದಿಗಳು ಈ ಪಿಶಾಚಿಯನ್ನು
ಬಿಡಿಸುತ್ತಾರೆ. ನಮ್ಮ ಸೀತು ಸರಿಹೋಗುತ್ತಾನೆ, ನಮ್ಮಪ್ಪನ ಕಾಲದಿಂದ
ಆ ಮರದಲ್ಲಿ ಬ್ರಹ್ಮ ರಾಕ್ಷಸ ಸೇರಿಕೊಂಡಿದೆ ಎಂದು ಎಲ್ಲರೂ ಅನ್ನುತ್ತಿದ್ದರು.
ಹುಚ್ಚಾಸ್ಪತ್ರೆಗೆ ಸೇರಿಸುವುದು ಬೇಡ ಅಂದ್ರೆ ಮನೆತನದ ಹೆಸರೇ ಕೆಟ್ಟುಹೋಗುತ್ತದೆ
ಅಂದ್ರೆ
ಎಂದು ತಾಯಿ ಇನ್ನಿಲ್ಲದ ಹಾಗೆ ಹೇಳಿ ಅತ್ತೂ ಕರೆದೂ ರಂಪ ಮಾಡಿದರು.
'ನೀನೋ? ನಿಮ್ಮಪ್ಪನ ಕಾಲದ ನಂಬಿಕೆಗಳೋ? ಹಾಳಾಗಿ ಹೋಗಲಿ. ಮಗನೇ ಕೆಟ್ಟುಹೋದಮೇಲೆ ಮನೆತನದ ಹೆಸರು ಇದ್ದರೇನು? ಹೋದರೇನು? ಕೈಲಾದುದನ್ನೆಲ್ಲಾ ಮಾಡಿ ಅವನನ್ನು ಗುಣಪಡಿಸಲೇಬೇಕು' ಎಂದು ಹಠ ಹಿಡಿದು, ಸೀತುವನ್ನು ಮಾನಸಿಕ ರೋಗಗಳ ಆಸ್ಪತ್ರೆಗೆ, ತಂದೆ ಕರೆದುಕೊಂಡು ಹೋಗಿ ಸೇರಿಸಿದರು.
ಮಾನಸಿಕ ಆಸ್ಪತ್ರೆಯಲ್ಲಿ ಸೀತುವಿಗೆ ಸಂಬಂಧಿಸಿದಂತೆ, ತಂದೆಯಿಂದ ದೊರಕಬಹುದಾದ ವಿವರಗಳನ್ನೆಲ್ಲವನ್ನೂ ಬರೆದುಕೊಂಡರು. ಹುಟ್ಟಿದಾಗಿನಿಂದ ಸೀತುವಿನ ಆರೋಗ್ಯದ ಬಗ್ಗೆ ಮಾಹಿತಿಗಳನ್ನು ಪಡೆದು ಗುರುತು ಹಾಕಿದರು. ಮನೆಯವರ ವಿಷಯಗಳನ್ನೂ ಎಳ್ಳಂಬಳಸೆ ಪ್ರಶ್ನೆಗಳಿಂದ ತಿಳಿದುಕೊಂಡರು. ಸೀತುವಿನ ರೂಂಮೇಟಿನ ವಿಳಾಸವನ್ನು ಕಾಲೇಜಿನ ಪ್ರಿನ್ಸಿಪಾಲರ ಮೂಲಕ ಪತ್ತೆ ಹಚ್ಚಿ, ಅವನಿಂದ ದೊರೆತ ವಿವರಗಳನ್ನೂ ಪಡೆದರು. ಒಂದೆರಡು ವಾರಗಳ ಕಾಲ ಸೀತುವಿನ ಮನಃಸ್ಥಿತಿಯನ್ನು ಅತಿ ಸೂಕ್ಷ್ಮವಾಗಿ ಪರಿಶೀಲಿಸಿದರು.
ಇದನ್ನೆಲ್ಲಾ ಮಾಡುವಾಗ ಉಪಶಮನದ ಚಿಕಿತ್ಸೆಯನ್ನೂ ಶ್ರದ್ಧೆಯಿಂದ ನಡಸುತ್ತಿದ್ದರು.