ಎರಡೂ ಪ್ರಪಂಚಗಳ ಮಧ್ಯೆ ಸಾಮರಸ್ಯವನ್ನು ಮಾಡಿಕೊಳ್ಳುವ, ಮಾನವ ಪ್ರಯತ್ನವು ಮುರಿದುಬಿತ್ತು. ಎರಡೂ ಪ್ರಪಂಚಗಳ ಮಧ್ಯೆ ಬಿರುಕು ಒಡೆಯಿತು. ಬಿರುಕು ದೊಡ್ಡದಾಯಿತು. ಒಳಪ್ರಪಂಚದಲ್ಲೇ ಅವ ಸುಖಪಡುವಂತಾದ. ಹೊರಪ್ರಪಂಚ ಮಧ್ಯೆ ಬಿರುಕು ಬಿಡುವುದನ್ನು ;ಸ್ಕೀಜೋ ಅಂದರೆ ಛಿದ್ರವಾದ; ಫ್ರೆನಿಯಾ, ಅಂದರೆ ಮನಸ್ಸು ; ಎಂದು ಮನೋವಿಜ್ಞಾನಿಗಳು ಕರೆಯುತ್ತಾರೆ. ಸ್ಕೀಜೋಫ್ರೆನಿಯಾಗಳಲ್ಲಿ ಹಲವಾರು ಮಾದರಿಗಳಿವೆ. ಇವೆಲ್ಲಾ ವಿಭಿನ್ನವಾದುವೇನೋ ಎಂದನಿಸುತ್ತದೆ. ಆದರೆ ಮೂಲತಃ ಒಂದೇ ಆದುದರಿಂದ ಆ ಹೆಸರನ್ನು ಬಳಸುತ್ತಾರೆ. ಹಾಗೂ ವಿಭಿನ್ನವಾದ ಮಾದರಿಗಳಿರುವುದರಿಂದ, ಸ್ಕೀಜೋಫ್ರೆನಿಯಾಗಳು ಎಂದು ಬಹುವಚನಗಳನ್ನು ಬಳಸುತ್ತಾರೆ.
ಈ ಬೇನೆಯು ಉಲ್ಬಣವಾಗಿ, ಸ್ಕೀಜೋಫ್ರೆನಿಯಾ ಎಂದು ಸ್ಪಷ್ಟವಾಗುವ ಮೊದಲು, ಹಲವಾರು ಮುನ್ಸೂಚನೆಗಳು, ಕೆಲವು ವರ್ಷಗಳಿಂದಲೂ ಕಾಣಬರತ್ತವೆ. ಆಗ ಅವನ್ನು ಗಮನಿಸಿ, ತಕ್ಕ ಚಿಕಿತ್ಸೆಯನ್ನು ತಾಳ್ಮೆಯಿಂದ ನಡೆಸಿದರೆ, ಬೇನೆಯು ಮೂಡುವುದನ್ನು ಯಶಸ್ವಿಯಾಗಿ ತಡೆಹಿಡಿಯಬಹುದು. ಅಂತಹ ಮುನ್ಸೂಚನೆಗಳು ಹೀಗಿವೆ :
೧. ಮೊದಮೊದಲು ಆಲೋಚಿಸುವ ರೀತಿಯಲ್ಲಿ ಕುಂದುಗಳು ಕಾಣಬರುತ್ತವೆ. ಇದನ್ನು ನೀವು ಗಮನಿಸಲು ಆಗಲಿಲ್ಲ. ಏಕೆಂದರೆ ಅವ ಸ್ವಾಭಾವಿಕವಾಗಿ ಮಿತಭಾಷಿ, ಅದರಲ್ಲೂ ನಿಮ್ಮೊಂದಿಗೆ ಧೈರ್ಯದಿಂದ, ಮನಸ್ಸು ಬಿಚ್ಚಿ ಎಂದೂ ಮಾತನಾಡಿರಲಿಲ್ಲ. ಮಾತನಾಡುವ ಪ್ರಯತ್ನವನ್ನು ಅವನೂ ಮಾಡಿರಲಿಲ್ಲ ; ನೀವೂ ಮಾಡಿರಲಿಲ್ಲ. ಮಾತನಾಡಬೇಕಾದಾಗ ಇಬ್ಬರೂ ಮುಂದಾಗಬೇಕು ; ಒಬ್ಬರಿಂದಲೇ ಸಾಧ್ಯವಿಲ್ಲ. ಮಾತನಾಡಿದ್ದಿದ್ದರೆ, ಸೀತುವಿನ ಆಲೋಚನೆಗಳು ಸಮಂಜಸವಾಗಿಲ್ಲ. ಎಲ್ಲೋ ಕುಂದು ಇದೆ ಎಂದು ತಿಳಿಯುತ್ತಿತ್ತು; ನಿಮಗೆ.
೨. ಅವನ ಭಾವನೆಗಳಲ್ಲಿ ಕುಂದು ಕಾಣಿಸಿತು. ತನ್ನ ರೂಂಮೇಟ್ ಛಾಂಪಿಯನ್ ಆದಾಗ, ಎಲ್ಲರಿಗಿಂತಲೂ ಸೀತು ಸಡಗರಪಡಬೇಕಾಗಿತ್ತು. ಆದರೆ ನಿರ್ಲಿಪ್ತನಾಗಿದ್ದ. Callous ಆಗಿದ್ದ.
ಭಾವನೆಗಳು ಎಂದರೇನು ? ನಮ್ಮವನೊಬ್ಬ ಸುಖಪಡುವಾಗ-ನಮಗೇ ಆ ಸುಖದ ಅನುಭವವಾದಂತೆ, ನಮಗೂ ಸುಖ ತಟ್ಟುತ್ತದೆ. ಆಗ ನಮ್ಮವನು ಎಂಬುದರ ನಿಜವಾದ ಅರ್ಥವು ಸ್ಪಷ್ಟವಾಗುತ್ತದೆ. 'ನಾನು' ಎಂಬುವುದು, ನನ್ನಿಂದ ಹೊರಹೊರಟು, ನಮ್ಮವನು, ಎನ್ನಿಸಿಕೊಳ್ಳುವವನನ್ನೂ ತನ್ನಲ್ಲಿ ಅಳವಡಿಸಿ