ಎಂದು ಕ್ಷಮಾಪಣೆಯನ್ನು ಕೇಳಿಕೊಂಡರು.
ತಂದೆಯು ತುಂಬಾ ಚೂಟಿವಂತ. ಬಡತನದ ಬೇಗೆಯಲ್ಲಿ ಬಾಲ್ಯವನ್ನು ಕಳೆದಿದ್ದವ, ಹಲ್ಲು ಕಚ್ಚಿಕೊಂಡು ಸ್ವಸಾಮರ್ಥ್ಯದಿಂದ, ಹಾಗೂ ಭಗವಂತನ ಕೃಪೆಯಿಂದ, ತಾನಿದ್ದ ಪರಿಸರದಲ್ಲಿ ಗೌರವ ಸ್ಥಾನವನ್ನು ಪಡೆದುಕೊಂಡಿದ್ದ. ತನ್ನ ಮಗನ ಬೇನೆಗೆ ತನ್ನ ಕರಾಚೂರಿನ ನವಳಿಕೆಯೇ ಕಾರಣ ಎಂದು ಡಾಕ್ಟರು ಅಂದಾಗ, ಅವನ ಸ್ವಾಭಿಮಾನಕ್ಕೆ ಧಕ್ಕೆ ತಗುಲಿತು. ಅದರ ಜತೆಗೂ ಮಗನಿಗೆ ಗುಣವಾಗಬೇಕು, ಡಾಕ್ಟರಿಗೂ ನನ್ನ ಮೇಲೆ ದ್ವೇಷವೇನೂ ಇಲ್ಲ. ಅಂದಮೇಲೆ ಯಾಕೆ ನಾನು ಸಂಸಾರದಲ್ಲಿ ಹಾಗೆ ನಡೆದುಕೊಂಡೆ. ಏಕೆ ಸೀತುವಿನ ವಿಚಿತ್ರ ವರ್ತನೆಯನ್ನು ಗಮನಿಸಲಿಲ್ಲ. ಎಂಬುದನ್ನು ಹೇಳಿದರೆ, ತನ್ನ ಪ್ರತಿಷ್ಠೆಯೂ ಉಳಿಯಿತು, ಮಗನಿಗೆ ನೆರವೂ ಆಯಿತು ; ಹಾಗೂ ಜ್ಞಾನಾರ್ಜನೆಯೂ ಆದಂತಾಯಿತು, ಎಂದುಕೊಂಡ. ಆದುದರಿಂದ ತಂದೆಯು ನುಡಿದ :
'ಈಗ ಇದನ್ನೆಲ್ಲಾ ಹೇಳುತ್ತಿದ್ದಿರಿ ಡಾಕ್ಟರೇ ! ಇವೆಲ್ಲಾ ಸರಿ ! ಆದರೆ ನಾವೇನೂ ವೈದ್ಯರುಗಳಲ್ಲ. ಇವೆಲ್ಲಾ ಹೇಗೆ ತಿಳಿಯಬೇಕು ?
ಪರೀಕ್ಷೆಗಳಲ್ಲಿ ಸೀತು ತುಂಬಾ ಯಶಸ್ವಿಯಾಗಿ ಪ್ಯಾಸಾಗುತ್ತಿದ್ದ. ಮನಸ್ಸು ಪಲ್ಲಟವಾದರೆ ಓದುವುದಕ್ಕೆ ಸಾಧ್ಯವೇ ? ಮನೆಯಲ್ಲಿ ಅವನ ನಡವಳಿಕೆಯು ಲಕ್ಷಣವಾಗಿಯೇ ಇತ್ತು. ನಾವು ಹೇಳಿದುದನ್ನು ಸುಲಭವಾಗಿ ಅರ್ಥಮಾಡಿ ಕೊಳ್ಳುತ್ತಿದ್ದ, ಸೂಕ್ತವಾದ ಪ್ರತಿಕ್ರಿಯೆಯನ್ನೂ ಮಾಡುತ್ತಿದ್ದ. ಸ್ಮರಣಶಕ್ತಿಯು ಅವನಲ್ಲಿ ಚೆನ್ನಾಗಿಯೇ ಇತ್ತು. ಯಾವತ್ತೋ ನಡೆದುದನ್ನು ಅಚ್ಚುಕಟ್ಟಾಗಿ ಜ್ಞಾಪಿಸಿಕೊಳ್ಳುತ್ತಿದ್ದ. ಮನಸ್ಸು ವಿಕಲ್ಪವಾದರೆ ಇದು ಸಾಧ್ಯವೇ ಡಾಕ್ಟರೇ ! ನನ್ನೊಡನೆ ಅಪರೂಪಕ್ಕೆ ಮಾತನಾಡುತ್ತಿದ್ದ. ಒಪ್ಪಿಕೊಳ್ಳುತ್ತೇನೆ. ಆದರೆ ಮಾತನಾಡಿದಾಗಲೆಲ್ಲ ಜಾಣತನದ ಉತ್ತರಗಳನ್ನು ಸಲೀಸಾಗಿ ಕೊಡುತ್ತಿದ್ದ. ಮನಸ್ಸು ಛಿದ್ರವಾಗಿದ್ದರೆ ಹಾಗೆ ಉತ್ತರಿಸಲು ಹೇಗೆ ಸಾಧ್ಯ ? ಕಳೆದ ಸರ್ತಿ ಬೇಸಿಗೆ ರಜಕ್ಕೆಂದು ಬಂದಿದ್ದಾಗ, ಕೆಟ್ಟುಹೋಗಿದ್ದ ಹೊಲಿಯುವ ಯಂತ್ರವನ್ನು ಅವನೇ ರಿಪೇರಿ ಮಾಡಿದ. ಆ ಮೊದಲು ಕಂಪೆನಿಯವರು ಎರಡು ಬಾರಿ ಬಂದು ರಿಪೇರಿ ಮಾಡಿದ್ದರು. ಆದರೂ ಅದು ಸರಿಯಾಗಿ ನಡೆಯುತ್ತಿರಲಿಲ್ಲ. ಇವ ಅದನ್ನು ಲಕ್ಷಣವಾಗಿ ರಿಪೇರಿ ಮಾಡಿದ. ಇಂಜನಿಯರ್ ಏನೂ ಇವ ಓದುತ್ತಿಲ್ಲ. ಅದನ್ನೆಲ್ಲಾ ಕಲಿಯಲು, ಬುದ್ಧಿ ಕೆಟ್ಟಿದ್ದರೆ ಇದನ್ನೆಲ್ಲಾ ಮಾಡುಕ್ಕೆ ಆಗುತ್ತಿತ್ತೇ ಅಂದಮೇಲೆ ನಾವು ಹೇಗೆ ಎಚ್ಚರವನ್ನು ವಹಿಸಲಾಗುತ್ತಿತ್ತು ?
ನಿಮ್ಮ ಪರೀಕ್ಷಾ ವಿಧಾನಗಳಲ್ಲಿ ಏನಾದರೂ ತಪ್ಪಿರಬಹುದೋ ? ಎಂದು