ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸ್ಟೀಜೋಪೊನಿಯಾಗಳು

೨೨೩

ರಾಮಭದ್ರ ಗಳಿಸುತ್ತಿದ್ದ. ಹೀಗಾಗಿ ಬಿ.ಎಸ್‌ಸಿ. ಆನರ್ಸ್‌ನಲ್ಲಿ ಎರಡನೆ ಬ್ಯಾಂಕು ಪಡೆದಾಗ ಅವನ ತಾಯ್ತಂದೆಯರು ಕೂಡ ಹಿಗ್ಗಲಿಲ್ಲ. ಅಷ್ಟು ಸರ್ವೆಸಾಮಾನ್ಯವಾಗಿ ಹೋಗಿತ್ತು ರಾಮಭದ್ರನ ಬ್ಯಾಂಕು ಗಿಟ್ಟಿಸುವುದು. ಬ್ಯಾಂಕ್ ಬರದೇ ಇದ್ದಿದ್ದರೆ, ಪ್ರಾಯಶಃ ತಾಯ್ತಂದೆಯರು ಆಶ್ಚರ್ಯಪಟ್ಟು ಕುಗ್ಗುತ್ತಿದ್ದರೇನೋ?

ಪರೀಕ್ಷೆಯ ಫಲಿತಾಂಶಗಳು ಹೊರಬಿದ್ದ ೨-೩ ವಾರಗಳೊಳಗೆ ಅಮೆರಿಕಾದ ವಿಶ್ವವಿದ್ಯಾಲಯದಿಂದ ರಾಮಭದ್ರನಿಗೆ ಕಾಗದವೊಂದು ಬಂದಿತು. ಡಾಕ್ಟರೇಟ್ ಪರೀಕ್ಷೆಗೆ ಓದುವುದಾದರೆ ವಿದ್ಯಾರ್ಥಿವೇತನವನ್ನು ಕೊಡುವುದಾಗಿ ಆಮಂತ್ರಣವಿತ್ತು. ಅದನ್ನು ಸ್ವೀಕರಿಸುವುದಾಗಿ ರಾಮಭದ್ರ ಉತ್ತರವನ್ನು ಬರೆದು ಹಾಕಿದ.

ಪರೀಕ್ಷೆಯ ಫಲಿತಾಂಶಗಳು ಹೊರಬಿದ್ದ ಕೂಡಲೇ, 'ಮುಂದೆ ದಿಳ್ಳಿ ಪರೀಕ್ಷೆಗೆ ಕೂತುಕೊಳ್ಳುತ್ತೀಯಾ ? ಅಥವಾ ಎಂ.ಎಸ್‌ಸಿ. ಪರೀಕ್ಷೆಗೆ ಓದುತ್ತೀಯಾ' ಎಂದು ತಾಯಿ ಕೇಳಿದಳು. ದಿಳ್ಳಿ ಪರೀಕ್ಷೆಗೆ ಕೂತು ಐ.ಎ.ಎಸ್. ಮಾಡಿ ದೊಡ್ಡ ಆಫೀಸರ್ ಆದರೆ ಸಂಭ್ರಮದ ಮದುವೆಯನ್ನು ಅದ್ದೂರಿಯಾಗಿ ಮಾಡಿಸಬಹುದು ಎಂದಾಕೆಯ ಆಸೆ. ಹಾಗೂ ಇನ್ನೂ ಓದು ಓದು ಅಂತ ಮುಂದುವರೆಯುತ್ತಲೇ ಇದ್ದರೆ, ದೊಡ್ಡ ಚಾಕರಿ ಸಿಗುವುದು ಯಾವಾಗ ? ಆತನಕ ತಾನು ಬದುಕಿರುತ್ತೇನೆ ಎನ್ನುವ ನಂಬಿಕೆ ಎಲ್ಲಿದೆ ? 'ಮುಂದೇನು ಮಾಡಬೇಕು ಎನ್ನುವುದನ್ನು ಈಗಲೇ ಯಾಕೆ ತೀರ್ಮಾನಿಸಬೇಕು' ಎಂದು ಮಗ ಉತ್ತರಿಸಿದ. ತಾಯಿ ಮಕ್ಕಳ ಮಧ್ಯೆ ಇರುವ ಆದರದ ಧ್ವನಿಯಲ್ಲಲ್ಲ. ರೈಲ್ವೆ ಸ್ಟೇಷನ್ನಿನಲ್ಲಿ ಅಪರಿಚಿತರು ಟೈಂ ಎಷ್ಟು ಎಂದು ಕೇಳಿದರೆ, ಇಷ್ಟು ಅಂತ ಕೈಗಡಿಯಾರವನ್ನು ನೋಡಿಕೊಂಡು ಉತ್ತರಿಸುವವನ ಧ್ವನಿಯಲ್ಲಿ, ರಾಮು ನುಡಿದಿದ್ದ. ಮಾತನ್ನು ಮುಂದುವರಿಸಲಿಲ್ಲ. ತಾಯಿಯೂ ತೆಪ್ಪಗಾಗಿದ್ದಳು.

ಆ ರಾತ್ರಿ ತಾಯಿಯು, 'ಏನೂ ಅಂದ್ರೆ, ಮುಂದೇನು ಮಾಡಬೇಕು ಅಂತಿದಾನೆ, ರಾಮು ; ನೀವೊಂದು ಮಾತು ಕೇಳಬಾರದೇ ? ಬೆಳಗ್ಗೆ ನಾನು ಕೇಳಿದೆ. ಹೀಗಂತ ಉತ್ತರ ಕೊಟ್ಟ, ನೀವು ಕೇಳಿದರೆ ಸರಿಯಾಗಿ ಉತ್ತರ ಕೊಟ್ಟಾನು. ಅವನಿಗೆ ಅಸಡ್ಡೆ, ನನ್ನ ಕಂಡರೆ ; ಓದು ಬರಹ ಕಾಣದ ಮುದುಕಿ ಅಂತ", ಎಂದು ಗಂಡನಿಗೆ ಹೇಳಿದಳು.

'ರಾಮುವಿನ ಸ್ವಭಾವ ನಿನಗೆ ತಿಳಿದಿದೆ. ನಮ್ಮಿಬ್ಬರ ಹತ್ತಿರ, ಹುಡುಗತನದಿಂದಲೂ, ಮುಖ ಕೊಟ್ಟು ನಗುನಗುತ ಮಾತನಾಡಿದ್ದಿಲ್ಲ ಎಂದೂನು, ಅಗತ್ಯ ಬಿದ್ದಾಗ ಅವಶ್ಯಕವಾದ ಎರಡು ಮಾತಾಡ್ತಾನೆ. ಅಷ್ಟೇ, ಯಾವ ಪರೀಕ್ಷೆಯಲ್ಲಿ