ಮನಮಂಥನ
ಮಾತಾಡಲಾರಂಭಿಸಿದೆ. 'ಏನಾಗುತ್ತಪ್ಪ ನಿನಗೆ, ಎಷ್ಟು ದಿನಗಳಿಂದ ? ನೋಡುವುದಕ್ಕೇನೋ ತೋಳನ ಹಾಗೆಯೇ ಇದೆ. ರಹಸ್ಯವಾಗಿ ಮಾತಾಡಬೇಕು ಎನಿಸಿದರೆ ಒಳಕೊಠಡಿಗೆ ಹೋಗೋಣ' ಎಂದೆ.
ನನ್ನ ಈ ಪ್ರಶ್ನೆಗೂ ರೋಗಿಯ ಮುಖದಲ್ಲಿ ಕಿರುನಗೆಯೇ ಪ್ರತಿಕ್ರಿಯೆ. “ಎಲಾ, ಇವನ ! ಇದರೊಳಗೇನೋ ಗೂಢಾರ್ಥದ ಮರ್ಮವಿರಬೇಕು' ಎಂದೆನಿಸಿತು. 'ಬಾಪ್ಪ, ಒಳಕ್ಕೆ ಹೋಗೋಣ, ಪರೀಕ್ಷೆಯನ್ನು ಮಾಡ್ತೀನಿ' ಎಂದು ಹೇಳುತ್ತಾ ಒಳ ಕೊಠಡಿಗೆ ಕರೆದುಕೊಂಡು ಹೋದೆ. ತನಗಾದುದನ್ನೂ ಆಗುತ್ತಿರುವುದನ್ನೂ ಅವ ವಿವರಿಸಿದ.
ಅವನ ಕಷ್ಟವೆಲ್ಲಾ ಉಸಿರಾಡುವುದರಲ್ಲಿ. ಕಾಲೇಜಿಗೆ ಸೈಕಲ್ ಮೇಲೆ ಹೋಗುತ್ತಿರುತ್ತಾನೆ. ಮುಕ್ಕಾಲು ದಾರಿ ಹೋದ ಮೇಲೆ ಉಸಿರು ನಿಂತು ಹೋಗುತ್ತಂತೆ. ಉಸಿರು ನಿಂತಿದ್ದರೂ ಒಂದೆರಡು ಫರ್ಲಾಂಗ್ ಸೈಕಲ್ ತುಳಿಯುತ್ತಾನಂತೆ. ಅಲ್ಲಿಗೂ ಮೇಲಿನ ಉಸಿರು ಮೇಲೆ, ಕೆಳಗಿನ ಉಸಿರು ಕೆಳಗಡೆಯೇ ಇದ್ದು ಬಿಡುತ್ತಂತೆ. ಉಸಿರು ಆಡುವುದೇ ಇಲ್ಲವಂತೆ. ಹೀಗೆಯೇ ಇದ್ದರೆ ಸತ್ತು ಹೋಗುತ್ತೇನಲ್ಲಾ, ಎಂದು ಹೆದರಿಕೆಯಾಗುವುದಂತೆ. ರಸ್ತೆಯಲ್ಲಿ ಸತ್ತು ಬಿದ್ದರೆ ಎಷ್ಟು ಅವಮಾನವಾಗುತ್ತೆ ಎಂದು ಅನಿಸಿ ನಾಚಿಕೆಯಾಗುತ್ತದಂತೆ. ಆಗ ಮನೆಗೆ ಹಿಂತಿರುಗಿಬಿಡುತ್ತಾನಂತೆ. ಮನೆಯಲ್ಲಿ ಹಾಸಿಗೆಯ ಮೇಲೆ ಬಿದ್ದುಕೊಂಡು, ತುಂಬಾ ಶ್ರಮಪಟ್ಟ ಮೇಲೆ, ಉಸಿರು ಆಡಲು ಸಾಧ್ಯವಾಗುವುದಂತೆ, ಕೆಲವು ವೇಳೆ ಎದೆಯು ಡವ ಡವ ಹೊಡೆದುಕೊಳ್ಳುವುದಂತೆ, ಮನಸ್ಸೇ ಸ್ತಿಮಿತದಲ್ಲಿರುವುದಿಲ್ಲವಂತೆ. ಎಲ್ಲಾದರೂ ಓಡಿಹೋಗೋಣ ಅಂತ ಅನ್ನಿಸುತ್ತದಂತೆ.
ಇವೆಲ್ಲಾ ಹೇಗೆ ಪ್ರಾರಂಭವಾಯಿತೋ, ಅದು ಅವನಿಗೆ ನಿಖರವಾಗಿ ತಿಳಿಯದು. ಎಷ್ಟು ದಿವಸಗಳಿಂದ ಎನ್ನುವುದೂ ಸರಿಯಾಗಿ ಗೊತ್ತಿಲ್ಲ. ಆದರೆ ಕಳೆದ ಆರೇಳು ತಿಂಗಳುಗಳಿಂದ ಉಸಿರಾಟದ ಕಾಟವು ಅತಿಯಾಗಿ ಕಾಡಲಾರಂಭಿಸಿದೆ ಎಂದು ಹೇಳುತ್ತಾನೆ. ವಿದ್ಯಾಭ್ಯಾಸಕ್ಕೆ ಅಡಚಣೆಯುಂಟುಮಾಡುತ್ತಿದೆ ಎಂದವನಿಗೆ ಗೊತ್ತು. ಆದರೂ ಅದರ ಕಾಳಜಿಯು ವಿಶೇಷವಾಗಿಯೇನೂ ಇಲ್ಲ. ಆದರೆ ಹಠಾತ್ತನೆ ಉಸಿರು ಸಿಕ್ಕಿಕೊಳ್ಳುವುದರಿಂದ, ಜಟ್ಟಂತ ಯಾವ ಮುನ್ಸೂಚನೆಯೂ ಇಲ್ಲದೆ ಸತ್ತು ಹೋಗುತ್ತೇನೆ ಎನ್ನುವ ಭಯವು ವಿಪರೀತವಾಗಿದೆ.
ಶೈಶವ, ಬಾಲ್ಯ, ಆತನಕದ ಕೌಮಾರ್ಯದ ವಯಸ್ಸುಗಳಲ್ಲಿ, ಯಾವುದೊಂದು ವಿಚಿತ್ರವಾದ, ಅಥವಾ ಭಯ ಹುಟ್ಟಿಸುವಂತಹ ಅನುಭವಗಳೂ ಆಗಿದ್ದ ನೆನಪಿರಲಿಲ್ಲ.