ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮನಸ್ಸಿನ ಸ್ವರೂಪ

೩೦೭

ಪ್ರಕೃತಿಯಲ್ಲಿ, ಜಂಗಮ ಜೀವಿಗಳು ಎಂದರೆ ಪ್ರಾಣಿವರ್ಗವು ಸಾಧಿಸಿರುವ ಪ್ರಗತಿಯ ಚರಿತ್ರೆಯನ್ನು ತಿಳಿದುಕೊಂಡರೆ, ಲೇವಡಿ ಮಾಡಿ ವ್ಯಂಗ್ಯ ಚಿತ್ರ ಕಾರರು, ಅಪಹಾಸ್ಯವನ್ನು ಮಾಡಲಿಲ್ಲ ಎನಿಸುತ್ತದೆ.

ಲಕ್ಷಾಂತರ ವರ್ಷಗಳ ಹಿಂದೆ ಪ್ರಪಂಚದಲ್ಲಿ ಡಿನೋಸಾರಸ್ ಜಾತಿಯ ದಡೂತಿಯಾಗಿದ್ದ ಉರಗಗಳಿದ್ದುವು. ಈಗ ಕಾಣಬರುವ ಹಲ್ಲಿ, ಓತಿಕ್ಯಾತ, ಇತ್ಯಾದಿಗಳಂತಿದ್ದ ಭಾರೀ ಮೃಗಗಳು, ಹಿಂಗಾಲಿನ ಮೇಲೆ ಇವು ಕುಳಿತು, ಮೈಯನ್ನು ಎತ್ತಿದರೆ, ಅವುಗಳ ಮುಂಗಾಲು ನೆಲದಿಂದ ೬೦-೭೦ ಅಡಿಗಳಷ್ಟು ಎತ್ತರದಲ್ಲಿರುತ್ತಿದ್ದುವು. ಶ್ರವಣಬೆಳಗೊಳದ ಅಚ್ಚರಿಯನ್ನು ತರುವ ಗೊಮ್ಮಟಗಿಂತಲೂ ಹೆಚ್ಚು ಎತ್ತರದಲ್ಲಿರುತ್ತಿದ್ದುವು. ನೂರಾರು ಟನ್ ತೂಕವಿದ್ದ ಈ ಪ್ರಾಣಿಗಳ ತಲೆಯು, ಒಂದು ತೆಂಗಿನ ಕಾಯಿನ ಗಾತ್ರದಷ್ಟೇ ಇರುತ್ತಿತ್ತು. ತಲೆಯೊಳಗಿರುವ ಮೆದುಳೂ ಅಷ್ಟೇ ಸಣ್ಣದಾಗಿತ್ತು. ಇಂತಹ ಭಾರೀಪ್ರಮಾಣದ ಉರಗಗಳು, ಪ್ರಕೃತಿಯ ಪ್ರಗತಿಯಲ್ಲಿ ಹೇಳ ಹೆಸರಿಲ್ಲದೆ ನಾಶವಾಗಿಹೋದುವು.

ಆದರೆ ಅದೇ ಕಾಲದಲ್ಲಿದ್ದ ಜಿರಳೆಗಳು, ಚಿಕ್ಕದೇಹಕ್ಕೆ ಸಾಕಷ್ಟಾದ ಪುಟ್ಟ ಮೆದುಳನ್ನು ಹೊಂದಿವೆ. ದೇಹವನ್ನು ಅತಿ ಹೊರವಾಗಿ ಅವು ಬೆಳಸಿಕೊಳ್ಳಲಿಲ್ಲ. ಜಿರಳೆಗಳು ಇಂದೂ ಪ್ರಕೃತಿಯಲ್ಲಿ ಉಳಿದಿವೆ. ನಮ್ಮನ್ನು ಕಾಡಿ, ನಮ್ಮ ಊಟ ತಿಂಡಿ ಬಟ್ಟೆಗಳನ್ನು ಹೊಲಸು ಮಾಡುತ್ತಿವೆ ! ಜಿರಳೆಗಳು ಜನ್ಮತಾಳಿದ್ದು ಮುನ್ನೂರಕ್ಕೂ ಹೆಚ್ಚು ಬಿಲಿಯನ್ ವರ್ಷಗಳು ಎಂದು ಅಂದಾಜು ಮಾಡಿದ್ದಾರೆ. ಘಟಾನುಗಟಿ ಪ್ರಾಣಿಗಳ ವಂಶವು ಹಾಳಾಗಿ ಹೋಗಿದ್ದರೂ, ಜಿರಳೆಗಳು ಉಳಿದೇ ಇವೆ. ಡಿ. ಡಿ. ಟಿ. ಯನ್ನು ತಿಂದು ಈಗೀಗ ಅರಗಿಸಿಕೊಂಡು ವೃದ್ಧಿಯಾಗುತ್ತಿವೆ. ಅಂದರೆ ಮೆದುಳಿನ ಪ್ರಮಾಣವು ದೇಹದ ಪ್ರಮಾಣಕ್ಕೆ ಅನುಕೂಲವಾಗಿರಬೇಕು. ಹಾಗಲ್ಲದೆ ಮೆದುಳಿನ ಪ್ರಮಾಣವು ಅತಿ ಸ್ವಲ್ಪವಾಗಿ, ದೇಹವು ಅತಿ ದಡೂತಿಯಾದರೆ, ಕಾಲಾನುಕಾಲದಲ್ಲಿ ನಿರ್ವಂಶವಾಗುತ್ತವೆ. ಪ್ರಾಯಶಃ ಅದೇ ರೀತಿಯಲ್ಲಿ ಮೆದುಳು ಅತ್ಯಮೋಘವಾಗಿ ಬೆಳೆದರೆ, ದೇಹವು ಅತ್ಯಲ್ಪ ಪ್ರಮಾಣಕ್ಕೆ ಕ್ಷಯಿಸಿದರೆ, ಆಗಲೂ ಕಾಲಾನುಕಾಲದಲ್ಲಿ ಮಾನವ ಪ್ರಾಣಿಯು ಉಳಿಯುವುದು ಅಸಂಭವ.

ಈಗಿನ ಪ್ರಮಾಣಕ್ಕಿಂತ ಮೆದುಳು ಹತ್ತಾರುಪಾಲು ಹೆಚ್ಚಾಗಲು ಸಾಧ್ಯ. ಆಗ ದೇಹವೂ ಅಷ್ಟಾಗಿ ಕ್ಷಯಿಸಿರುವುದಿಲ್ಲ. ಅಂತಹ ಮಾನವ ಹತ್ತು ಹದಿನೈದು ಸಾವಿರ ವರ್ಷಗಳಲ್ಲಿ ಕಾಣಬರಬಹುದು. ಇಂದಿನ ಮಾನವನಿಗಿಂತ, ಅವನ ಮೇಧಾ ಶಕ್ತಿಯು ಬಹುಪಾಲು ಅಧಿಕವಾಗಿರುತ್ತದೆ.

ಇತರ ಪ್ರಾಣಿಗಳ ಮೆದುಳಿನ ತೂಕಕ್ಕಿಂತ ಮನುಷ್ಯನ ಮೆದುಳಿನ ತೂಕವು