ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೧೦

ಮನಮಂಥನ

ಒಂದು ಮೂಲಭೂತ ವ್ಯತ್ಯಾಸವನ್ನು ಇಲ್ಲಿ ಗಮನಿಸಬಹುದು. ನಗು ಮತ್ತು ಅಳು, ಲಜ್ಜೆ ಮತ್ತು ನಾಚಿಕೆ ಇತ್ಯಾದಿ ಭಾವನಾ ಪ್ರದರ್ಶನಗಳು ಮನುಷ್ಯ ಪ್ರಾಣಿಯಲ್ಲಿ ಮಾತ್ರ ಕಂಡುಬರುತ್ತವೆ. ಇತರ ಯಾವ ಪ್ರಾಣಿಗಳಲ್ಲೂ ಇರುವುದಿಲ್ಲ. ಮನುಷ್ಯ ಪ್ರಾಣಿಯಲ್ಲಿ ಮೆದುಳಿನ ಕಾರ್ಟೆಕ್ಸ್ ಭಾಗವು ಹೊರವಾಗಿ ಬೆಳೆದಿದೆ. ವಿಚಾರಪರತೆಯು ಮತ್ತು ಸ್ಮರಣೆ; ಇವು ಹೊಸ ಪ್ರಭಾವವನ್ನು ಬೀರಿ ಭಾವನಾ ಕೇಂದ್ರಗಳಲ್ಲಿ ನೂತನವಾದ, ಮತ್ತು ನವ್ಯವಾದ ಭಾವನಾ ಪ್ರದರ್ಶನಗಳನ್ನು ಸೃಷ್ಟಿಸಿದೆ. ಶೋಕ, ಹಾಸ್ಯ, ಅದ್ಭುತ, ಇತ್ಯಾದಿ ರಸಾನುಭಾವವು ಮನುಷ್ಯ ಪ್ರಾಣಿಯಲ್ಲಿ ಮಾತ್ರ ಕಾಣಬರುತ್ತದೆ.

ಭಾವನಾ ಕೇಂದ್ರಗಳಲ್ಲದೆ, ಬಾಳಿಗೆ ಅತ್ಯಗತ್ಯವಾದ ಇತರ ಕೇಂದ್ರಗಳು, ಮೆದುಳಿನ ಬುಡದಲ್ಲಿವೆ. ಉಸಿರಾಡುವುದರ ಕಾರ್ಯವನ್ನು ದೇಹಕ್ಕೆ ಅಗತ್ಯವಾದ ರೀತಿಯಲ್ಲಿ ನಿಯಂತ್ರಿಸುವುದು; ಅದೇ ರೀತಿ, ದೇಹದ ಶಾಖವನ್ನು ಹದವಾಗಿರಿಸುವುದು; ರಕ್ತಸಂಚಾರವು ದೇಹದಲ್ಲಿ ಅತ್ಯಗತ್ಯ ಕಾರ್ಯಗಳಿಗೆ ಮೀಸಲಾದ ನರಕೇಂದ್ರಗಳು, ಮೆದುಳಿನ ಬುಡದಲ್ಲಿವೆ. ಪ್ರಾಣಿಗಳಲ್ಲಿಯೂ, ಮನುಷ್ಯ ಪ್ರಾಣಿಗಳಲ್ಲಿಯೂ, ಈ ವ್ಯವಸ್ಥೆಯು ಸುಮಾರು ಪಾಲು ಒಂದೇ ರೀತಿಯಲ್ಲಿದೆ.

ಲಕ್ಷಾಂತರ ವರ್ಷಗಳ ಪ್ರಗತಿಯು ಸಾಧಿಸಿದಾಗ, ಮೆದುಳಿನ ಕಾರ್ಟೆಕ್ಸ್ ಭಾಗವು, ನಾಯಿಕೊಡೆಯಂತೆ, ಬುಡದ ಸುತ್ತಲೂ ಮತ್ತು ಮೇಲುಗಡೆಯೂ ಹೊರವಾಗಿ ಹರಡತೊಡಗಿತು. ಮಾನವನ ವಿಚಾರಪರ ಮನಸ್ಸು ಈ ಭಾಗದಲ್ಲಿ ಅತಿ ಚುರುಕಾಗಿ ಕಾರ್ಯವನ್ನು ಮಾಡಲಾರಂಭಿಸಿತು. ಸ್ಮರಣೆಯ ನೆರವು ವಿಚಾರಕ್ಕೆ ಅಗತ್ಯವಾದುದರಿಂದ, ಸ್ಮರಣಾವಿಭಾಗವೂ ಅಭಿವೃದ್ಧಿಸಿತು. ಇವೆರಡಕ್ಕೂ ನಿಕಟ ಸಂಬಂಧವಿರುವುದರಿಂದ, ಪರಸ್ಪರವಾಗಿ ಎರಡೂ ಭಾಗಗಳು ಅಭಿವೃದ್ಧಿಯನ್ನು ಅಮೋಘವಾಗಿ ಸಾಧಿಸಿಕೊಂಡುವು. ಇದನ್ನು ಸೆರಿಬಂ ಎಂದು ಕೆರೆಯುತ್ತಾರೆ.

ತಲೆಯ ಹಿಂಭಾಗದಲ್ಲಿ ಮತ್ತೊಂದು ಭಾಗವಿದೆ. ಸೆರಿಬೆಲ್ಲಂ ಎಂದು ಇದರ ಹೆಸರು. ನಾಲ್ಕು ಕಾಲುಗಳ ಪ್ರಾಣಿಯು ದೇಹದ ತೂಕವನ್ನು ಭದ್ರವಾಗಿ ನಾಲ್ಕೂ ಪಾದಗಳ ಮೇಲೆ ಹಾಕುತ್ತದೆ. ನಾಲ್ಕು ಕಾಲುಗಳಿದ್ದ ಮೇಜಿನಂತೆ, ಸುಭದ್ರವಾಗಿರುತ್ತದೆ. ಆದರೆ ಎರಡು ಕಾಲುಗಳ ಮೇಲೆ ನಡೆಯತೊಡಗಿದಾಗ ದೇಹದ ತೂಕವನ್ನು ಸರಿಯಾಗಿ ಹಂಚಬೇಕು, ಕಾಲುಗಳ ಮೇಲೆ ಅಷ್ಟೇ ಅಲ್ಲದೆ ನಡೆಯುವಾಗ, ಓಡುವಾಗ ಮುಗ್ಗರಿಸಬಹುದು. ಆಗ ಸಮತೋಲನವನ್ನು