ಮನಮಂಥನ
ಕೈಯನ್ನೋ ಕಾಲನ್ನೋ ಮುರಿದುಕೊಳ್ಳುತ್ತಾನೆ.
ಪಂಚೇಂದ್ರಿಯಗಳಿಂದ ಸೆರಿಬ್ರಂ ಇಗೆ ಸುದ್ದಿಯು ತಲಪುವುದು. ಅಲ್ಲಿಂದ ಸ್ಮರಣಾ ವಿಭಾಗಕ್ಕೂ ವಿಚಾರಪರ ಮನಸ್ಸಿಗೂ ಸುದ್ದಿಯು ಸಾಗಿ, ಆಸೆಯು ಹುಟ್ಟುವುದು. ಆಸೆಯ ಪೂರೈಕೆಗೆ ಅಗತ್ಯವಾದ ಕಾರ್ಯಕ್ರಮವನ್ನು ಸೆರಿಬೆಲ್ಲಂ ಇನ ನೆರವಿನಿಂದ ಸುಬಂ ನಡೆಸುವುದು. ಇವೆಲ್ಲವೂ ಸುಸೂತ್ರವಾಗಿ ನಡೆಯುತ್ತವೆ.
ವಿವಿಧವಾದ ಈ ಭಾಗಗಳಲ್ಲಿ ಸುದ್ದಿ ಸಂಪರ್ಕವು ಅಣಿಯಾಗಿರಬೇಕು. ನಿಖರವಾದ ಸಂಪರ್ಕವನ್ನು ಆಗುಮಾಡಲು ನರಗಳು ವಿಫುಲವಾಗಿ, ಹತ್ತೂ ಕಡೆಗಳಿಗೂ, ಹರಡಿಕೊಂಡಿರುತ್ತವೆ. ದೇಹವನ್ನು ಡಿಸೆಕ್ಸ್ ಮಾಡುವಾಗ ಕಣ್ಣಿಗೆ ನರಗಳು ಕಾಣಿಸುತ್ತವೆ. ಇಂತಹ ಒಂದೊಂದು ನರದಲ್ಲೂ ಸೂಕ್ಷ್ಮವಾದ ಸಾವಿರಾರು ಎಳೆಗಳು ಇರುತ್ತವೆ. ಒಂದೊಂದು ಎಳೆಯೂ ಎರಡು ವಿಶಿಷ್ಟ ಕೇಂದ್ರಗಳಿಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಅಂದರೆ ಕಣ್ಣಿಗೆ ಕಾಣಿಸುವ ನರಗಳೂ ಟೆಲಿಫೋನ್ ಕೇಬಲುಗಳಿದ್ದಂತೆ. ಒಂದೇ ಕೇಬಲಿನಂತೆ ಕಾಣಿಸಿದರೂ, ಹಲವಾರು ಬೇರೆ ಬೇರೆ ನಂಬರುಗಳಿಗೆ ಸಂಪರ್ಕವನ್ನು ಕಲ್ಪಿಸುವ ತಂತಿಗಳು ಇರುತ್ತವೆ. ಅದೇ ತರಹಾನೇ ನರಗಳೂ ಕೂಡ ಕಾಣಿಸುವ ನರಕ್ಕೆ ಪೆಟ್ಟು ಬಿದ್ದರೆ, ಎಲ್ಲಾ ಎಳೆಗಳೂ ತುಂಡಾಗದೆ ಇರಬಹುದು. ಕೆಲವು ಎಳೆಗಳು ತುಂಡಾಗಿ, ಸಂಬಂಧಪಟ್ಟ ಕೇಂದ್ರಗಳು, ಕಾರ್ಯವನ್ನು ಮಾಡಲಾಗದೆ ಇರಬಹುದು. ಆದರೆ ಮತ್ತೆ ಕೆಲವು ಎಳೆಗಳು ಉಳಿದುಕೊಂಡೂ ಇರಬಹುದು. ಅವುಗಳಿಗೆ ಸಂಬಂಧಪಟ್ಟ ಕಾರ್ಯಗಳು ಮುಂದುವರೆಯುತ್ತವೆ.
ವಿಚಾರಪರ ಮನಸ್ಸಿರುವ ಸೆರಿಬ್ರಂ ಇಗೂ, ಸ್ಮರಣಾ ಕೇಂದ್ರಗಳಿಗೂ, ನಿಕಟಸಂಪರ್ಕವನ್ನು ಕಲ್ಪಿಸುವ ಕೋಟ್ಯಾಂತರ ಮಾರ್ಗಗಳಿರುತ್ತವೆ. ಆದರೆ ಮಾನವನ ಸಾಮಾನ್ಯ ಬಾಳಿನಲ್ಲಿ, ಲಕ್ಷಾಂತರ ಮಾರ್ಗಗಳು ಮಾತ್ರ ಉಪಯೋಗಿಸಲ್ಪಡುತ್ತವೆ. ಕಲಿಕೆಯಿಂದ, ಅಭ್ಯಾಸದಿಂದ, ಇಂತಹ ಮಾರ್ಗಗಳ ಸಂಖ್ಯೆಯನ್ನು ಬಹಳ ಪಾಲು ಹೆಚ್ಚಿಸಬಹುದು. ಅತಿ ಜಾಣರು, ಪ್ರಚಂಡರು, ಎನಿಸಿಕೊಂಡವರಲ್ಲಿ ಹೀಗೆ ಆಗಿರುತ್ತದೆ.
ಮನಸ್ಸು ಸಮರ್ಪಕವಾಗಿ ಕೆಲಸವನ್ನು ಮಾಡದೆ ಇದ್ದಾಗ, ಮೆದುಳಿನಲ್ಲಿ ಸಂಪರ್ಕಮಾರ್ಗಗಳು ತುಂಡಾಗಿರಬಹುದು ಎಂದು ಊಹಿಸಬಹುದಾದರೂ, ಮೆದುಳನ್ನು ಪರೀಕ್ಷಿಸಿದಾಗ ಯಾವ ವ್ಯತ್ಯಾಸವೂ ಕಾಣಿಸುವುದಿಲ್ಲ. ಅಂದರೆ ಈಗ ಬಳಕೆಯಲ್ಲಿರುವ ಅತಿ ಸೂಕ್ಷ್ಮದರ್ಶಿಗಳಿಂದಲೂ ಯಾವ ಎಳೆಗಳು ಒಂದು ಸಣ್ಣ ನರದಲ್ಲಿ ಕೆಟ್ಟಿವೆ ಎಂಬುದು ಗೋಚರವಾಗದೆ ಇರಬಹುದು.