೪. ಬಾಲ್ಯ, ಆಗಿನ ಮನಸ್ಸು
ಕ್ಷೀರಸಾಗರದಲ್ಲಿ ವಟಪತ್ರದ ಮೇಲೆ ಮಲಗಿ, ಕಾಲಬೆರಳನ್ನು ಸುಖವಾಗಿ ಚೀಪುತ್ತ ಮಂದಸ್ಮಿತನಾಗಿ ಮಲಗಿರುವ ಮಗು, ಕೃಷ್ಣ ನಮ್ಮಲ್ಲಿ ಬಹಳ ಜನರ ಆರಾಧ್ಯ ದೇವರು. ಯಾವ ಯೋಚನೆಯೂ ಇರದೆ, ನಿಶ್ಚಿಂತನಾಗಿ ಮಂದಸ್ಮಿತನಾದ ಬಾಲಕೃಷ್ಣನು, ಅಂತಸ್ಮಿತನೂ ಆಗಿದ್ದಾನೆ ಎಂದು ಎಲ್ಲರ ನಂಬಿಕೆ. ಬಾಲಕೃಷ್ಣನಂತೆ ನಾವೂ ಬಾಳನ್ನು ನಡೆಸಿದರೆ ಬಲು ಚೆನ್ನ ಎಂದು ಆಸೆಯೂ ಆಗುತ್ತದೆ. ಆಳಮನಸ್ಸಿನ ಅಂತರಾಳದಲ್ಲಿರುವ ಇಂತಹ ಹಿರಿಯಾಸೆಯೇ ಪುರಾಣದ ಕತೆಗಳಾಗಿ, ಬಾಲಕೃಷ್ಣನ ರೂಪಿನಲ್ಲಿ ಪ್ರತೀಕವಾಗಿರಬಹುದು.
ಬೆರಳನ್ನು ಚೀಪುತ್ತ ಸಂತಸದಿಂದ ಮಲಗಿರುವ ಮಗುವಿನ ಹೊಟ್ಟೆಯು ತುಂಬಿರಬೇಕು. ಇಲ್ಲದಿದ್ದರೆ ಮಂದಸ್ಮಿತವಾಗಿರುವ ಬದಲು ರಚ್ಚೆ ಹಿಡಿದು ಲಬೋ ಲಬೋ ಮಾಡುತ್ತದೆ. ಹೊಟ್ಟೆಯು ಕಚ್ಚುತ್ತಲೂ ಇರಬಹುದು. ನೋವಾಗುತ್ತಿರಬಾರದು. ಸಾಫಾಗಿ, ಮಲ ಜಲಗಳ ವಿಸರ್ಜನೆಯೂ ಆಗಿರಬೇಕು. ಹಾಗಿರುವಾಗ, ಸಂತಸದಿಂದ ಬೆರಳನ್ನು ಚೀಪುತ್ತ ಮಂದಸ್ಮಿತವಾಗಿರುತ್ತದೆ.
ಮಗುವಿನ ಎದುರು ಅಪರಿಚಿತರು, ಅದರಲ್ಲೂ ವಿಚಿತ್ರ ಮುಖದವರು, ಹೋಗಿ ಗೊಗ್ಗರ ಧ್ವನಿಯಲ್ಲಿ ಮುದ್ದು-ಲಾಲಿ ಹಾಡ ಹೋದರೆ,ಮಗುವು ಅಳುತ್ತದೆ, ಕಿಠಾರಂತ ಕಿರುಚಿಕೊಂಡು ಆಳುತ್ತದೆ. ಆದರೆ ಪರಿಚಿತವಾದ ತಾಯಿ ಮುಖವನ್ನು ಕಂಡರೆ, ಮಾದಕ ನಗೆಯನ್ನು ಬೊಚ್ಚು ಬಾಯಿಯಲ್ಲಿ ಮೂಡಿಸುತ್ತದೆ. ಪುಟ್ಟ ಕೈಗಳೆರಡನ್ನೂ ಎತ್ತಿಕೋ ಎನ್ನುವಂತೆ ಚಾಚುತ್ತದೆ. ಎತ್ತಿಕೊಂಡ ತಾಯಿಯ ಕೊರಳಸುತ್ತ ತನ್ನ ಕೈಗಳನ್ನು ಬಳಸಿ ಹಿಡಿದುಕೊಳ್ಳುತ್ತದೆ.
ನಿಶ್ಚಿಂತರಾಗಿ ಬಾಲಕೃಷ್ಣನಂತೆ ಇರಬೇಕು ಎಂದು ಆಸೆಪಡುವಾಗ ಮಗುವಿಗಿರುವ ನಿರ್ಮಲ ಮನಸ್ಸು ಇರಬೇಕು ಎಂದು ಅರ್ಥವೇ ಹೊರತು, ಮಗುವಿನಂತೆ ತಾಯ ಆಸರೆಯನ್ನು ಸದಾಕಾಲವೂ ಪಡೆದಿರಬೇಕು ಎಂದಲ್ಲ. ಅಪರಿಚಿತರನ್ನು ಕಂಡರೆ ಬೆದರಿ ಬೊಬ್ಬೆ ಹಾಕಬೇಕು. ಎಂದಲ್ಲ. ಮಗುವು ಪರಾವಲಂಬಿ. ಹಸಿವಾದಾಗ ಅಳುವುದೊಂದೇ ಅದರ ಮನಸ್ಸು ಹೂಡುವ ಪ್ರತಿಕ್ರಿಯೆ. ತಾಯಿಯೋ ದಾದಿಯೋ ಆಗ ಬಂದು ಹಾಲನ್ನು ಕುಡಿಸುತ್ತಾಳೆ.