ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಬಾಲ್ಯ, ಆಗಿನ ಮನಸ್ಸು

೩೩೭

ಯಾವ ಕಾಳಜಿಯೂ ಅವರನ್ನು ಕಾಡಲಿಲ್ಲ.

ಸಾಲವನ್ನು ಮಾಡಿ ತುಪ್ಪವನ್ನು ಮೆಲ್ಲುವುದು ಹಿತವಾಗಿರಬಹುದು. ಅನಂತರ ಸಾಲ ಕೊಟ್ಟವನು ಬಂದು ಕಾಡತೊಡಗಿದಾಗ, ತುಪ್ಪವನ್ನು ಜತೆಗೆ ರಕ್ತವನ್ನೂ ಕೂಡ ಕಕ್ಕಬೇಕಾಗುತ್ತದೆ. ಲೌಕಿಕ ಜೀವನದಲ್ಲಿ ಇಂತಹ ಅನುಭವಗಳು ಸಾಮಾನ್ಯ. ಸಮಾಜದ ಭದ್ರತೆಗಾಗಲೀ, ವ್ಯಕ್ತಿಯ ನೆಮ್ಮದಿಗಾಗಲೀ, ಚಾರ್ವಾಕರ ಉಪದೇಶವು ವಿರೋಧವಾಗುತ್ತದೆ, ಆಭಾಸವನ್ನುಂಟುಮಾಡುತ್ತದೆ.

Reality Principle ಎಂಬುದು ತಾತ್ಕಾಲಿಕವಾದುದು ಎಂದರ್ಥ ಮಾಡಬಾರದು. ಲೌಕಿಕದ ಬಾಳನ್ನು ಸಂಪೂರ್ಣವಾಗಿ ಗಮನಿಸಬೇಕು. ಈ ವಿಷಯವನ್ನು ಏಕೆ ಉಲ್ಲೇಖಿಸಿದೆ ಎಂದರೆ, ಹಿರಿಯ ಮನನಿಗರು ಹಲವರು, ಮನಸ್ಸಿನ ನೆಮ್ಮದಿಯನ್ನು ಪಡೆಯಲು, ನಿನ್ನೆಯದೆಲ್ಲವನ್ನೂ ಮರೆತು ಬಿಡಬೇಕು; ನಾಳೆಯದರ ಚಿಂತೆಯನ್ನೂ ಮಾಡಬಾರದು. ಇಂದಿನ ಯೋಚನೆಯು ಮಾತ್ರ ಇಂದಿಗಿರಬೇಕು ಎಂದು ಉಪದೇಶಿಸಿದ್ದಾರೆ. ಪರಂಪರಾನುಗತವಾಗಿ ಬೆಳೆದು ಬಂದಿರುವ ಅನುಭವಗಳಿಂದ ಪಾಠಗಳನ್ನು ಕಲಿತು ಪ್ರವೃದ್ಧಿಸಿರುವ, ಮಾನವನ ಮನಸ್ಸು ಹಿಂದಿನದೆಲ್ಲವನ್ನೂ ಮರೆತುಬಿಡಬೇಕು ; ದಿನ ಬೆಳಿಗ್ಗೆ ನಿದ್ರೆಯಿಂದ ಎದ್ದಾಗ, ಈಗ ತಾನೆ ಹುಟ್ಟಿದೆ ಎಂದುಕೊಳ್ಳಬೇಕು ಎಂದರೆ, ಇದು ಸಾಧ್ಯವೇ ? ಎಂದು ಸಂದೇಹವುಂಟಾಗುತ್ತದೆ. ಇಂತಹ ಹಿರಿಯ ಮನನಿಗರು ನುಡಿದ ಉಪದೇಶದಲ್ಲಿ ಅಂತರ್ಗಭಿ್ರತವಾದ ಮತ್ತೆ ಯಾವುದೋ ಗೂಡಾರ್ಥವಿರಬೇಕು!

ವಯಸ್ಕರ ಮನಸ್ಸಿನಲ್ಲಿ Pleasure Principle, ಸುಖಾನ್ವೇಷಣೆಯ ಸೆಳೆತವು, Reality Principle, ವಾಸ್ತವಿಕ ಅರಿವಿನಿಂದ, ತಹಬಂದಿಯಲ್ಲಿರುತ್ತದೆ. Super- Ego ಅಥವಾ ಸತ್-ಚೈತನ್ಯಾಂಶವು ವಾಸ್ತವಿಕ ಅರಿವಿನಿಂದ, ಬಲಹೀನವಾಗುತ್ತದೆ. ನನ್ನ ಗೋಳು, ನನ್ನ ಬಾಳು, ನನಗೇ ಸಾಕಷ್ಟು ಸಂಕಟವನ್ನೀಯುತ್ತಿರುವುದರಿಂದ, ನೆರೆಹೊರೆಯವರ ಅಥವಾ ಸಮಾಜದ ಗೋಳುಕರೆಗೆ ಅಥವಾ ಉದ್ಧಾರಕ್ಕೆ ನಾನೇಕೆ ಒದ್ದಾಡಲಿ, ಎಂಬ ಮನೋಭಾವವು ಬೆಳೆಯುತ್ತದೆ. ಸಮಾಜವನ್ನು ಅಥವಾ ಲೋಕವನ್ನು ಉತ್ತಮಗೊಳಿಸುತ್ತೇನೆ ಎಂಬ ಧೈಯವು ಯೌವನದಲ್ಲಿ ಬರಸೆಳೆಯುತ್ತದೆ. ಆದರೆ ವಯಸ್ಕರಲ್ಲಿ ನನ್ನ ಪಾಡನ್ನು ಉತ್ತಮಪಡಿಸಿಕೊಂಡರೆ, ಅಥವಾ ಈಗಿರುವ ಮಟ್ಟದಲ್ಲಿಯಾದರೂ ಕಾಪಾಡಿಕೊಂಡರೆ ಸಾಕು ಎನ್ನುವಂತಾಗುತ್ತದೆ. ಲೋಕವನ್ನು ಅಥವಾ ಸಮಾಜವನ್ನು ಉದ್ಧರಿಸತೊಡಗುವ ತೆವಲು ಹಿಡಿದವರು ಏನನ್ನು ಬೇಕಾದರೂ ಮಾಡಿಕೊಳ್ಳಲಿ. ಅವರವರ ಹುಚ್ಚು ಅವರಿಗೆ ಆನಂದ ; ಎಂದು ತೆಪ್ಪಗಿರುತ್ತಾರೆ.