ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೪೦

ಮನಮಂಥನ

Super-Ego ಅಥವಾ ಸತ್-ಚೈತನ್ಯಾಂಶವು ವಯಸ್ಕರಲ್ಲಿ ಅತಿ ಮಂದವಾಗಿರುತ್ತದೆ. ಆದರೂ ಇದ್ದೇ ಇರುತ್ತದೆ. 'ನಾನು' ಎಂದುಕೊಳ್ಳುವ Egoವನ್ನು ಚುಚ್ಚುತ್ತಲೇ ಇರುತ್ತದೆ. ಸ್ವಾರ್ಥಕ್ಕಾಗಿ, ಸ್ಪರ್ಧಾ ಸಮಾಜದಲ್ಲಿ ಅಗತ್ಯವಾಗಿ ನಡೆಸಬೇಕಾದ, ಮೋಸ, ತಟವಟ, ಸುಳ್ಳು, ಚಾಡಿ ; ಇತ್ಯಾದಿಗಳನ್ನು ಮಾಡಿರುತ್ತಾನೆ. ಆ ರೀತಿ Ego ವನ್ನು ಹಿತವಾಗಿಸುತ್ತಾನೆ. ಆದರೆ ಹಾಗೆ ಮಾಡಿದ್ದು ವಿಹಿತವಲ್ಲ ಎನ್ನುವ ಅಪರಾಧ ಮನೋಭಾವವು ಕುಕ್ಕುತ್ತಲೇ ಇರುತ್ತದೆ. ಒಳಗೇ ಕುಕ್ಕುತ್ತಿರುವ ಈ ಕಾಟವನ್ನು ತಪ್ಪಿಸಿಕೊಳ್ಳಲು ವಯಸ್ಕರು, ದೇವರು ದಿಂಡರು ; ಭಕ್ತಿಭಜನೆ; ತೀರ್ಥಯಾತ್ರೆ ; ದಾನ ಧರ್ಮ ; ಇತ್ಯಾದಿಗಳಲ್ಲಿ ನಿರತರಾಗುತ್ತಾರೆ. ಸ್ವಲ್ಪ ಸಮಾಧಾನವನ್ನು ಪಡೆಯುತ್ತಾರೆ. ಉಲ್ಬಣವಾದ ಬೇನೆಯು ಮನೆಯಲ್ಲಿ ಕಾಣಿಸಿಕೊಂಡ ಕೂಡಲೇ ಮನೆದೇವರಿಗೆ ಮುಡುಪು ಕಟ್ಟಿಡುತ್ತಾರೆ. ಈ ಕಿರುಲಂಚದಿಂದ ಮನೆದೇವರು ತೃಪ್ತನಾಗಿ ಬೇನೆಯನ್ನು ವಾಸಿಮಾಡುತ್ತಾನೆ ಎಂದೇನಲ್ಲ. ಹಾಗೆ ಮುಡುಪನ್ನು ಕಟ್ಟಿಟ್ಟರೆ, ವಯಸ್ಕರ ಮತ್ತು ಮನೆಯ ಮುದುಕರ ಮನಸ್ಸಿನ ಆತಂಕವು ಸ್ವಲ್ಪ ಶಮನವಾಗುತ್ತದೆ. ಈ ಕಾರಣದಿಂದ, ಮುಡುಪು ಕಟ್ಟಿಡುವುದನ್ನು ಕಂಡು ಅನುಭಾವೀ ವೈದ್ಯರುಗಳು ಮೂದಲಿಸುವುದಿಲ್ಲ. ಮನೆಯವರ ಮನಸ್ಸಿಗೆ ನೆಮ್ಮದಿಯು ದೊರೆಯುವಂತಾಗುವುದು ಮುಖ್ಯ. ಮನೆ ದೇವರಿಗೆ ಮುಡುಪು ಕಟ್ಟಿಡುವುದರಿಂದ ನೆಮ್ಮದಿಯು ಉಂಟಾಗುವುದಾದರೆ, ನಿರುಪದ್ರವಿಯಾದ ಆ ಕಾರ್ಯವನ್ನು ಏಕೆ ಮಾಡಬಾರದು ?

ಮನಸ್ಸಿಗೆ ಆತಂಕವು ಹೆಚ್ಚಿದಾಗ, ತುಸು ನೆಮ್ಮದಿಯನ್ನು ಕೆಲವರಿಗೆ ನೀಡುವ ಇಂತಹ ಆಚರಣೆಯನ್ನು ಮೂಢನಂಬಿಕೆ ಎಂದು ಇತರರು ಹೀಯಾಳಿಸಬಹುದು. ಹೀಗೆ ಹೀಯಾಳಿಸುವವರು ಮೂಢರೋ ಏನೋ ಎಂಬ ಸಂಶಯವು ಬಂದರೆ ಆಶ್ಚರ್ಯವಲ್ಲ. ಇಂತಹ ಆಚರಣೆಗಳನ್ನು ಬಾಲ್ಯದಲ್ಲಿ ಕಂಡಿರುತ್ತೇವೆ. ಯೌವನದ ಉತ್ಸಾಹದಲ್ಲಿ ಪ್ರಾಮುಖ್ಯತೆಯನ್ನು ಕೊಡುವುದಿಲ್ಲ. ವಯಸ್ಕರಾದಾಗ ಬಾಳಿನ ಝಂಝಾಟದಲ್ಲಿ ಮೈಮನಗಳನ್ನು ತರಚಿಕೊಂಡಾಗ, ಬಾಲ್ಯದಲ್ಲಿ ಕಂಡಿದ್ದ, ಆಚರಣೆಗಳನ್ನು ನಡೆಸುತ್ತೇವೆ. ಆತಂಕವು ಮೂಡಿದಾಗ ಮನಸ್ಸಿನ ವಿಚಾರಪರ ಅಂಶವು ತೆಪ್ಪಗಾಗುತ್ತದೆ.

Super-Ego ಅಥವಾ ಸತ್-ಚೈತನ್ಯಾಂಶ ಪ್ರಭಾವದಿಂದ, ಭಕ್ತಿ ಮತ್ತು ಮೂಢನಂಬಿಕೆಗಳು ಉಂಟಾಗಬಹುದು ಎನಿಸುತ್ತದೆ. ಏಕೆಂದರೆ ಆಗ ವಿಚಾರಪರ ಮನಸ್ಸಿನ ಅಂಶವು, 'ನಾನು' ಸೋತೆ. ಕಲಿತಿರುವ ಜ್ಞಾನದಿಂದ, ಮುಂದೆ ಏನನ್ನೂ ಮಾಡಲಾರೆ. ಮುಂದೆ ಆಗಬಹುದಾದುದನ್ನು ಅನುಭವಿಸಲೇ ಬೇಕು. ಆದರೆ