ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮನಸ್ಸಿನ ಚಟುವಟಿಕೆಗಳು

೩೫೭

ಸಿಗರೇಟ್ ಮುಗಿದು ಹೋಯಿತು, ಬರೆಯುವುದಕ್ಕೆ ಇನ್ನೂ ಪ್ರಾರಂಭಿಸಿಯೇ ಇಲ್ಲ.ಆಗಲೇ ತಿರುಕನ ಕನಸನ್ನು ಕಾಣಲು ಶುರು ಹಚ್ಚಿದ್ದೇನಲ್ಲಾ ! ಹಗಲು ಗನಸಿನ ಮೋಜಿಗೆ ಒಳಬಿದ್ದೆನಲ್ಲಾ, ಎಂಬ ಕೊರಗು ಅರೆಕ್ಷಣ ಕಾಡಿತು. ಹೀಗೆ ಕಾಲದ ಅಪವ್ಯಯವನ್ನು ಮಾಡಬಾರದು. ನಿಮ್ಮಂತ ಕೂತು ಬರೆಯಬೇಕು ಎಂದು ನಿರ್ಧರಿಸಿದೆ.

ಟೆಲಿಫೋನ್ ಬಾರಿಸಿತು, ಟಿಂಗ್, ಟಿಂಗ್ ಅಂತ. ಶಪಿಸುತ್ತಾ ರಿಸೀವರನ್ನು ಎತ್ತಿದೆ. 'ರಾಮು ಮಗಳ ಮದುವೆಗೆ ಯಾಕೆ ನೀ ಬರಲಿಲ್ಲ. ಉಳಿದಿರುವವರು ನಾವು ನಾಲ್ಕು ಜನ ಹಳಬರು. ನೀನು ಯಾಕೆ ಬರಲಿಲ್ಲ ? ಆರೋಗ್ಯವಾಗಿದ್ದರೆ ಬರದೆ ತಪ್ಪಿಸಿಕೊಳ್ಳುವವನಲ್ಲ. ಆದ್ದರಿಂದ ಧಾರೆ ಮಂಟಪದಿಂದ ಹಿಂತಿರುಗಿ ಬಂದ ಮೇಲೆ ನಿನಗೆ ರಿಂಗ್ ಮಾಡಿದೆ' ಎಂದು ಶಾಮು ಕೇಳುತ್ತಿದ್ದ. “ನಿನಗೆ ಗೊತ್ತಲ್ಲಾ ನನ್ನ ಸೊಂಟದ ಕಾಯಿಲೆಯ ವಿಚಾರ. ಜಟ್ಟಂತ ಬಿಗಿದುಕೊಂಡು ಬಿಡುತ್ತೆ, ಅಳ್ಳಾಡಲೂ ಆಗುವುದಿಲ್ಲ' ಎಂದು ಸುಳ್ಳು ಸಬೂಬನ್ನು ಸಲೀಸಾಗಿ ಹೇಳಿದೆ. ಆದರೆ ರಾಮುವಿನ ಮಗಳನ್ನು ಹುಟ್ಟಿದಂದಿನಿಂದ ನೋಡುತ್ತಿದ್ದೆ, ಮುದ್ದಿಸುತ್ತಿದ್ದೆ. ರಾಮು ನಾನೂ ಅಷ್ಟು ಗಳಸ್ಯ ಕಂಠಸ್ಯ. ಅಗತ್ಯವಾಗಿ ಹೋಗಬೇಕಾಗಿತ್ತು. ತಪ್ಪು ಮಾಡಿದೆ, ರಾಮುವಿನ ಮಗಳು ಮಾಮಾ ಬರಲೇ ಇಲ್ಲ ಎಂದು ನೊಂದುಕೊಳ್ಳುತ್ತಾಳೇನೋ ಎನ್ನುವ ಅಪರಾಧ ಮನೋಭಾವವು ಕಾಡತೊಡಗಿತು. ಮನಸ್ಸಿಗೆ ತುಂಬಾ ನೋವಾಯಿತು. ಆಗ ಅನ್ನಿಸಿತು, 'ಮದುವೆಯ ಗಲಾಟೆ, ಗಂಡನನ್ನು ಕದ್ದು ಕದ್ದು ನೋಡುವ ಸಡಗರದಲ್ಲಿರುತ್ತಾಳೆ. ಮುಂದಿನ ಬಾಳಿನ ಹೊಂಗನಸುಗಳನ್ನು ಕಾಣುತ್ತಿರುತ್ತಾಳೆ. ಅವಳ ಜತೆಗಾರ್ತಿಯರು ಛೇಡಿಸುವುದನ್ನು ಯಾವ ರೀತಿ ಉತ್ತರಿಸಬೇಕು, ಎಂದು ಹವಣಿಸುತ್ತಿರುತ್ತಾಳೆ. ನನ್ನ ನೆನಪು ಯಾಕಾದರೂ ಬಂದೀತು?' ಹೀಗೆಲ್ಲಾ ಮನಸ್ಸು ಯೋಚಿಸಿದಾಗ ತುಸು ಸಮಾಧಾನವಾಯಿತು. ಅಪರಾಧವನ್ನು ಮಾಡಿದೆ ಎನ್ನುವ ಕೊರಗು ಕರಗುತ್ತ ಹೋಯಿತು. ಮಾಡಿದ ತಪ್ಪಿಗೆ ಕೊರಗುವುದನ್ನು, ನನ್ನ ಮನಸ್ಸು ತಾನೇ ಹಲವಾರು ಸಬೂಬುಗಳನ್ನು ಹೂಡಿ, ತಪ್ಪಿಸಿಕೊಂಡಿತು.

ಅಂದರೆ ಈ ತನಕ ತನ್ನ ಮನಸ್ಸಿನ ಚಟುವಟಿಕೆಗಳು ಮೂರು ತೆರನಾದುವು. ೧. ಬರೆಯತೊಡಗಿದ್ದು. ಅದಕ್ಕೆ ಅಗತ್ಯವಾದ ಇತರ ಚಟುವಟಿಕೆಗಳು. ೨. ಹಗಲುಗನಸುಗಳನ್ನು ಕಾಣುವುದು. ೩. ಅಪರಾಧ ಮನೋಭಾವವು ಉಂಟಾದಾಗ ಸಮಾಧಾನವನ್ನು ಮಾಡಿಕೊಳ್ಳುವುದು.

ಮೂರೂ ತೆರನ ಚಟುವಟಿಕೆಗಳು ಸ್ವಾರ್ಥಿ ಚಟುವಟಿಕೆಗಳು ನನಗಾಗಿ