ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೭೮
ಮನಮಂಥನ

ಬುದ್ಧಿಯನ್ನು ಉಪಯೋಗಿಸಿ, ಅನುಭವದ ನೆರವು ಪಡೆದು ಅನುಮಾನ ಪ್ರಮಾಣದಿಂದ ಹೀಗಿರಬಹುದು ಎಂದು ಊಹಿಸಬಹುದಷ್ಟೇ. ಸಮುದ್ರದ ಗರ್ಭದಾಳದಲ್ಲಿ ಕಣ್ಣುಗಳಿಲ್ಲದ ಅದ್ಭುತವಾದ ಅತಿದೊಡ್ಡ ಗಾತ್ರದ ಪ್ರಾಣಿಗಳಿವೆಯಂತೆ.ಕಾರ್ಗತ್ತಲಲ್ಲಿ ಹುಟ್ಟಿ ಅಲ್ಲೇ ಬೆಳೆದು ಅಲ್ಲೇ ಸಾಯುವ ಅವುಗಳಿಗೆ ಕಣ್ಣಾದರೂಏಕೆ ಬೇಕು?

ಮನಸ್ಸಿನ ಆಳದಲ್ಲಿರುವ ಜಗ್ಗಾಡಿ ಮನಸ್ಸನ್ನು ನಡೆಸುವ, Id ಶಕ್ತಿಯು ಸಮುದ್ರದಾಳದಲ್ಲಿರುವ ಘೋರ ಪ್ರಮಾಣದ ಜಲಚರಗಳಂತೆಯೇ ! ಲೌಕಿಕ ಪ್ರಪಂಚದ ಹೊರಗೆ ಏನಿದೆ ಎನ್ನುವುದರ ಕಲ್ಪನೆಯೂ ಅವುಗಳಿಗಿರುವುದಿಲ್ಲ !

ಮಹಾಸಾಗರದ ತಳದಲ್ಲಿ, ಪುರಾಣದ ಕತೆಯ ಪ್ರಕಾರ, ಅತ್ಯಧಿಕ ಪ್ರಮಾಣದ ಕೂರ್ಮವು ಇದೆಯಂತೆ. ಅದರ ಬೆನ್ನೊಡಲು ಬಲು ಕಠಿಣವೂ ಕಠೋರವೂ ಆಗಿದೆಯಂತೆ. ವಾಸ್ತವಿಕವಾದ ಬ್ರಹ್ಮಾಂಡ, ಅದರ ಬೆನ್ನ ಮೇಲೆ ಮಂದರ ಪರ್ವತವನ್ನು ಇರಿಸಿದರಂತೆ. ಸಮುದ್ರ ಮಥನದಲ್ಲಿ ಮಂದರ ಪರ್ವತವೇ ಕಡೆಗೋಲು, ಮನಸ್ಸಿನಲ್ಲಿ Ego ಇದ್ದಂತೆ, ಸಮುದ್ರದಲ್ಲಿ ಮಂದರ ಪರ್ವತ ವಾಸ್ತವಿಕವಾದ ಲೌಕಿಕವಾದ ಬ್ರಹ್ಮಾಂಡದ ಮೇಲೆ ಪ್ರತಿಷ್ಠಿತವಾಗಿರುತ್ತದೆ.

ಕಡೆಗೋಲನ್ನು ಕಡೆಯಬೇಕಾದರೆ ಎರಡೂ ಕಡೆಗಳಲ್ಲಿ ಸೆಳೆದಾಡುವ ಹಗ್ಗವಿರುವಂತೆ ಸಮುದ್ರ ಮಥನದ ಕತೆಯಲ್ಲಿ, ಹೆಬ್ಬಾವಾದ, ಕಾಲದ ಸಂಕೇತವಾದ, ವಾಸುಕಿಯನ್ನು ಮಂದರ ಪರ್ವತದ ಸುತ್ತ ಬಿಗಿದು ಕಡೆಯುವರಂತೆ.

ಕಡೆಯುವವರು ಯಾರು ? ಒಂದು ಕಡೆ ಸುರರು, ಇನ್ನೊಂದು ಕಡೆ ಅಸುರರು, ಇಬ್ಬರೂ ಜತೆ ಜತೆಯಲ್ಲಿ ಹುಟ್ಟಿದ, ದಿತಿ ಮತ್ತು ಸವತಿಯಾದ ಅದಿತಿಯ ಮಕ್ಕಳು ಇತ್ತ ಮತ್ತು ಅತ್ತ ವಾಸುಕಿಯನ್ನು ಹಿಡಿದು ಸಮುದ್ರವನ್ನು ಕಡೆಯತೊಡಗಿದರು. ಮಥಿಸಿದರು.

ಮನಸ್ಸಿನ ಸಾಗರದಲ್ಲಿ ವಾಸ್ತವಿಕವಾದ ಪಿಂಡಾಂಡದ ಮೇಲೆ ನಿಂತಿರುವ Ego ವನ್ನು ಅತ್ತ Id ಗಣಗಳೂ ಇತ್ತ Super-Ego ಗಣಗಳೂ ಕಡೆಯುತ್ತವೆ. ವಿರಾಮವಿಲ್ಲದೆ, ಸರಭರ ಕಡೆಯುತ್ತಿರುತ್ತವೆ. Ego ಒಮ್ಮೆ ಲೌಕಿಕ ವಾಸ್ತವಿಕೆಯತ್ತ ಸೆಳೆಯಲ್ಪಡುತ್ತದೆ. ಮರುಕ್ಷಣದಲ್ಲಿ ಅಲೌಕಿಕವಾದ ಶಾಶ್ವತದತ್ತ ಎಳೆಯಲ್ಪಡುತ್ತದೆ.

ಈ ತರಹ ಬಿರುಸಿನ ಮಥನದಿಂದಾಗಿ, ಸಮುದ್ರದಲ್ಲಿ ಮೊದಲು ತೇಲಿ ಬಂದಿತ್ತು ವಿಷ; ಹಾಲಾಹಲ, ಬ್ರಹ್ಮಾಂಡವನ್ನು ಸುಟ್ಟು ನಾಶಪಡಿಸುವಂತಹ ಹಾಲಾಹಲ, ಆದರೆ ಪುರಾಣದ ಕತೆಯಲ್ಲಿ, ಶಿವನು ಕೈವಲ್ಯದ ಕೈಲಾಸದಿಂದ ಬಂದು ಲೋಕ ಕಲ್ಯಾಣಕ್ಕಾಗಿ, ಹಾಲಾಹಲವನ್ನು ಆಪೋಶನ ತೆಗೆದುಕೊಂಡನಂತೆ.