ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮನಸ್ಸಿನ ಮಥನ
೩೮೧

ನನ್ನೆದುರಿಗೆ ಒಮ್ಮೆ ಅತ್ತ. ಅಂತಹ ತಾಯಿಯು ಯಾರಿಗೆ ಸಿಗುತ್ತಾರೆ ಡಾಕ್ಟರ್ ! ಅವಳ ನಿಷ್ಕಪಟವಾದ ಆಶೀರ್ವಾದದಿಂದಲೇ ನಾನೀಗ ಹತ್ತೂ ಜನರಿಗೆ ಅನ್ನವನ್ನು ನೀಡುವಂತಾಗಿದ್ದೇನೆ ಎಂದ. ಇಂತಹ ಅನುಪಮ ವಾತ್ಸಲ್ಯವು ಬಡ ಸಂಸಾರಗಳಲ್ಲಿ ಸಾಧ್ಯವೇ ಹೊರತು, ಶ್ರೀಮಂತರ ಬಂಗಲೆಗಳಲ್ಲಿ ಖಂಡಿತಾ ಇಲ್ಲ.

ನೆಂಟರಿಷ್ಟರ, ತಾಯ್ತಂದೆ ಮಕ್ಕಳ, ತುಂಬು ವಾತ್ಸಲ್ಯಕ್ಕಿಂತ ಹಿರಿದಾದ ಆಭರಣವು ಉಂಟೆ? ಆದಕಾರಣ ದರಿದ್ರ ಲಕ್ಷ್ಮಿಯು ಕಾಳಭವಿಷ್ಯದ ಸಂಕೇತವಾದರೂ ವಾತ್ಸಲ್ಯದ ಆಭರಣವನ್ನು ತೊಟ್ಟಿರುತ್ತಾಳೆ : ಮೆರೆಸಿ ಮಡಿಲಿಗೆ ಹಾಕಿಕೊಂಡು ದೇವಿಯಾಗಿ ರಕ್ಷಿಸುತ್ತಾಳೆ, ರಕ್ಷಾಕವಚವಾಗುತ್ತಾಳೆ. ಆಜೀವ ಪರ್ಯಂತ. ಆದುದರಿಂದಲೇ ಏನೋ ತುಂಬೊಲವಿನ ಮನನಿಗರು, ಹೊನ್ನನ್ನು ಕಾರ್ಕೋಟಕ ವಿಷ ಎಂದಂದರು.

ಲೌಕಿಕದ ಬಾಳಿನಲ್ಲಿ ಈಜಾಡಲೇಬೇಕಾದ ನಮ್ಮಂತಹವರು ಮನವನ್ನು ಮಥಿಸಿದಾಗ, ಸಮುದ್ರ ಮಥನದಲ್ಲಿ ಹುಟ್ಟಿ ಬಂದ ಹಿರಿಯಕ್ಕನು, ದರಿದ್ರ ಲಕ್ಷ್ಮಿಯು, ಅತ್ಯಂತ ವಾತ್ಸಲ್ಯಮಯೀ, ವಾತ್ಸಲ್ಯವೇ ಆಕೆಯ ಆಭರಣ ; ತನಗಾಗಿ ಆಕೆಯು ಏನನ್ನೂ ಬಯಸುವುದಿಲ್ಲ. ಅಂದ ಮೇಲೆ ಬೇಡುವಳೇ ? ಎನ್ನಿಸುತ್ತದೆ.

ಪೌಗಂಡ ವಯಸ್ಸಿನಲ್ಲಿ, ಪರಾವಲಂಬನದಿಂದ, ಸ್ವಾವಲಂಬನದ ಹೊಸಲನ್ನು ದಾಟುವಾಗ, ಉದಾತ್ತವಾದ ಲೋಕ ಕಲ್ಯಾಣದ ಧೈಯವು ಪ್ರಜ್ವಲಿಸುತ್ತಿರುವಾಗ, ಲೋಕವನ್ನು ಉದ್ಧರಿಸುತ್ತೇನೆ. ಎಂತಹ ಸಂಕಟ, ನೋವು, ಬಡತನ, ನನ್ನನ್ನು ಕಾಡಿದರೂ ಧೃತಿಗೆಡುವುದಿಲ್ಲ ಎಂದು, ಆತ್ಮ ಬಲಿಯ, ನಾಲ್ಕೂ ಮೂಲೆಯ ಶಿಲುಬೆಯ, ಸ್ಪಷ್ಟ ಚಿತ್ರವನ್ನು ಆರಾಧಿಸುತ್ತಾನೆ.

ಆದರೆ ವಯಸ್ಕನಾಗತೊಡಗಿದಾಗ, ಧೈಯವು ದೂರವಾಗುತ್ತದೆ. ಬಲ ಮಸುಕಾಗುತ್ತದೆ. ತಾನು, ತನ್ನ ತಾತ್ಕಾಲಿಕ ಸುಖ ಎಂಬುವು, ಧೈಯದ ಸುತ್ತಲೂ ಪರದೆಯನ್ನು ಹರಡುತ್ತದೆ. ಹರಡಿ ಕವಿಯುತ್ತದೆ.

ಸಮುದ್ರ ಮಥನದ ಹಿರಿಯಕ್ಕ ಜೇಷ್ಠಾ ; ಮನ ಮಥನದಲ್ಲೂ ಹಿರಿಯಕ್ಕನಾಗಿ ವಾತ್ಸಲ್ಯವನ್ನು ಎತ್ತೆತ್ತಲೂ ಸುತ್ತಲೂ ಹರಡುವ, ಮಾನವನ ರಕ್ಷೆಯಾಗುತ್ತಾಳೆ ; ಶಿಲುಬೆಯಿಂದ ಸಾಕ್ಷಾತ್ಕಾರವನ್ನು ಕರುಣಿಸುತ್ತಾಳೆ.

೩. ಸಮುದ್ರ ಮಥನದ, ಪುರಾಣದ ಕತೆಯಲ್ಲಿ, ಜೇಷ್ಠಾ ಹೊರಹೊಮ್ಮಿದ ನಂತರ, ಕಾಣಿಸಿಕೊಂಡುದು, 'ಪ್ರಸನ್ನಾತಾ ಸಮುತ್ಪನ್ನ'ವಾದ 'ಸೋಮ'. ಮೂರನೆಯದಿದು. ಶೀತಾಂಶುರುಂಗ್ಟಲಃ-ತಂಪಾದುದಂತೆ, ಸೋಮ. ಚಂದ್ರಮನು ತಂಪು.